ನೇಪಾಳದ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅವರ ರಾಜೀನಾಮೆಯ ಬಳಿಕ ಉಂಟಾದ ರಾಜಕೀಯ ಅನಿಶ್ಚಿತತೆಗೆ ತೆರೆ ಬೀಳಿಸಲು, ಮಾಜಿ ಮುಖ್ಯನ್ಯಾಯಮೂರ್ತಿ ಸುಶೀಲಾ ಕರ್ಕಿ (Sushila Karki) ಅವರನ್ನು ಹಂಗಾಮಿ ಪ್ರಧಾನಿಯಾಗಿ ನೇಮಿಸಲಾಗಿದೆ. ಶುಕ್ರವಾರ ರಾತ್ರಿ ಅವರು ಪ್ರಮಾಣ ವಚನ ಸ್ವೀಕರಿಸಿದರು.
73 ವರ್ಷದ ಸುಶೀಲಾ ಕರ್ಕಿ ನೇಪಾಳದ ಮೊದಲ ಮಹಿಳಾ ಪ್ರಧಾನಿಯಾಗಿ ಇತಿಹಾಸ ನಿರ್ಮಿಸಿದ್ದಾರೆ.
ನೇಪಾಳದ ಅಧ್ಯಕ್ಷ ರಾಮಚಂದ್ರ ಪೌಡೆಲ್ ಅವರು ಕರ್ಕಿ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಸಮಾರಂಭದಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ, ಉನ್ನತ ಸರ್ಕಾರಿ ಅಧಿಕಾರಿಗಳು, ಸೇನೆ ಮುಖ್ಯಸ್ಥರು ಮತ್ತು ರಾಜತಾಂತ್ರಿಕರು ಹಾಜರಿದ್ದರು.
ಅಧ್ಯಕ್ಷ ಪೌಡೆಲ್ ಪ್ರಕಾರ, ಹಂಗಾಮಿ ಸರ್ಕಾರಕ್ಕೆ ಆರು ತಿಂಗಳೊಳಗೆ ಸಂಸತ್ ಚುನಾವಣೆ ನಡೆಸುವ ಅಧಿಕಾರ ನೀಡಲಾಗಿದೆ.
ಯುವ ಪ್ರತಿಭಟನಾಕಾರರು ಭ್ರಷ್ಟಾಚಾರ, ರಾಜಕೀಯ ಅವ್ಯವಸ್ಥೆ ಕೊನೆಗೊಳಿಸಬೇಕು ಹಾಗೂ ಸಾಮಾಜಿಕ ಜಾಲತಾಣಗಳ ಮೇಲಿನ ನಿಷೇಧ ತೆಗೆದುಹಾಕಬೇಕು ಎಂದು ಒತ್ತಾಯಿಸಿದ್ದರು. ಸೋಮವಾರ ರಾತ್ರಿ ನಿಷೇಧವನ್ನು ರದ್ದುಪಡಿಸಲಾಗಿದೆ.
ಸುಶೀಲಾ ಕರ್ಕಿಯ ಜೀವನ ಪಯಣ
- 1952 ಜೂನ್ 7ರಂದು ವಿರಾಟ್ ನಗರದಲ್ಲಿ ಜನನ
- ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ
- ಶಿಕ್ಷಕಿಯಾಗಿ ವೃತ್ತಿ ಆರಂಭ
- ನಂತರ ನ್ಯಾಯಾಂಗ ಸೇವೆಗೆ ಪ್ರವೇಶ
- 2009ರಲ್ಲಿ ಸುಪ್ರೀಂ ಕೋರ್ಟ್ ಖಾಯಂ ನ್ಯಾಯಮೂರ್ತಿಯಾಗಿ ನೇಮಕ
- 2016ರಲ್ಲಿ ನೇಪಾಳದ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿ ಸ್ಥಾನ ವಹಿಸಿಕೊಂಡರು
- ನಿಷ್ಪಕ್ಷಪಾತತೆ ಮತ್ತು ಭ್ರಷ್ಟಾಚಾರವಿಲ್ಲದ ವ್ಯಕ್ತಿ ಎಂಬ ಖ್ಯಾತಿ ಪಡೆದರು
ಭಾರತವು ನೇಪಾಳದ ಹೊಸ ಮಧ್ಯಂತರ ಸರ್ಕಾರವನ್ನು ಸ್ವಾಗತಿಸಿದೆ. “ಈ ಸರ್ಕಾರ ಶಾಂತಿ ಮತ್ತು ಸ್ಥಿರತೆಯನ್ನು ತರಲಿದೆ” ಎಂದು ಭಾರತದ ವಿದೇಶಾಂಗ ಸಚಿವಾಲಯ ತಿಳಿಸಿದೆ.







