
Kochi (Kerala): ಕೀನ್ಯಾದ ಮಾಜಿ ಪ್ರಧಾನಮಂತ್ರಿ ರೈಲಾ ಒಡಿಂಗಾ (80) (Former Kenyan Prime Minister Raila Odinga) ಅವರು ಹೃದಯಾಘಾತದಿಂದ ಕೇರಳದ ಎರ್ನಾಕುಲಂ ಜಿಲ್ಲೆಯ ಕೂಥಾಟುಕುಳಂನಲ್ಲಿ ಇಂದು ಬೆಳಿಗ್ಗೆ ನಿಧನರಾದರು. ಬೆಳಗ್ಗೆ ನಡಿಗೆಯ ವೇಳೆ ಅವರಿಗೆ ಹೃದಯಾಘಾತವಾಗಿದ್ದು, ತಕ್ಷಣ ಆಸ್ಪತ್ರೆಗೆ ಕರೆದೊಯ್ದರೂ ಅವರು ಪ್ರಾಣ ಕಳೆದುಕೊಂಡರು.
ಒಡಿಂಗಾ ಅವರು ಆಯುರ್ವೇದ ಚಿಕಿತ್ಸೆಗೆ ಕೇರಳಕ್ಕೆ ಬಂದಿದ್ದರು. ಬೆಳಗ್ಗೆ ವಾಕ್ ವೇಳೆ ಕುಸಿದು ಬಿದ್ದ ಅವರನ್ನು ಶ್ರೀಧರಿಯಂ ಆಯುರ್ವೇದ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರಕ್ಕೆ ಕರೆದೊಯ್ದರು. ಆದರೆ, ಬೆಳಿಗ್ಗೆ 9.52ಕ್ಕೆ ಅವರು ಕೊನೆಯುಸಿರೆಳೆದರು ಎಂದು ಆಸ್ಪತ್ರೆ ತಿಳಿಸಿದೆ.
ಆರು ದಿನಗಳ ಹಿಂದೆ ಅವರು ತಮ್ಮ ಮಗಳು ರೋಸ್ಮೆರಿ ಮತ್ತು ಕುಟುಂಬ ಸದಸ್ಯರೊಂದಿಗೆ ಕೂಥಾಟುಕುಳಂಗೆ ಬಂದಿದ್ದರು. ರೋಸ್ಮೆರಿ ಈ ಹಿಂದೆ ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಕಣ್ಣಿನ ದೃಷ್ಟಿ ಮರಳಿ ಪಡೆದಿದ್ದರು. ಆ ಅನುಭವದ ಹಿನ್ನೆಲೆಯಲ್ಲಿ ಒಡಿಂಗಾ ಅವರು ಚಿಕಿತ್ಸೆಗೆ ಬಂದಿದ್ದರು ಎಂದು ಮೂಲಗಳು ತಿಳಿಸಿವೆ.
ಒಡಿಂಗಾ ಅವರ ಮೃತದೇಹವನ್ನು ಕೂಥಾಟುಕುಳಂನ ದೇವ ಮಾತಾ ಆಸ್ಪತ್ರೆಯಲ್ಲಿ ಇಡಲಾಗಿದೆ. ವಿದೇಶಿ ಪ್ರಾದೇಶಿಕಾ ನೋಂದಣಿ ಕಚೇರಿ ಅಧಿಕಾರಿಗಳು ಮತ್ತು ಸ್ಥಳೀಯ ಪೊಲೀಸರು ಅಗತ್ಯ ಶಿಷ್ಟಾಚಾರ ಕ್ರಮಗಳನ್ನು ಕೈಗೊಂಡಿದ್ದಾರೆ.
ಕೀನ್ಯಾದ ಮಾಜಿ ಪ್ರಧಾನಿ ರೈಲಾ ಒಡಿಂಗಾ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. “ನನ್ನ ಆತ್ಮೀಯ ಗೆಳೆಯ ಮತ್ತು ಕೀನ್ಯಾದ ಮಾಜಿ ಪ್ರಧಾನಿ ರೈಲಾ ಒಡಿಂಗಾ ಅವರ ನಿಧನ ದುಃಖಕರ. ಅವರು ಒಬ್ಬ ಶ್ರೇಷ್ಠ ರಾಜತಾಂತ್ರಿಕ ಮತ್ತು ಭಾರತದ ಪ್ರೀತಿಯ ಸ್ನೇಹಿತರು,” ಎಂದು ಪ್ರಧಾನಿ ಮೋದಿ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮೋದಿಯವರು ತಮ್ಮ ಗುಜರಾತ್ ಮುಖ್ಯಮಂತ್ರಿಯಾಗಿದ್ದ ದಿನಗಳಿಂದಲೇ ಒಡಿಂಗಾ ಅವರನ್ನು ಹತ್ತಿರದಿಂದ ಅರಿತಿದ್ದರು ಎಂದು ಸ್ಮರಿಸಿದ್ದಾರೆ. 2022ರಲ್ಲಿ ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿಯೂ ಅವರು ಒಡಿಂಗಾ ಹಾಗೂ ಅವರ ಮಗಳು ರೋಸ್ಮೆರಿ ಅವರ ಆಯುರ್ವೇದ ಚಿಕಿತ್ಸೆ ಕುರಿತು ಉಲ್ಲೇಖಿಸಿದ್ದರು.


