
ಅಂದು ಅಪಮಾನ ಮಾಡಿದ ಮಾಲ್ಡೀವ್ಸ್, (Maldives) ಈಗ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು (Prime Minister Modi) ತಮ್ಮ 60ನೇ ಸ್ವಾತಂತ್ರ್ಯ ದಿನಾಚರಣೆಯ ಮುಖ್ಯ ಅತಿಥಿಯಾಗಿ ಆಹ್ವಾನಿಸಿದೆ.
2023ರಲ್ಲಿ ಮಾಲ್ಡೀವ್ಸ್ ಸರ್ಕಾರ “ಇಂಡಿಯಾ ಔಟ್” ಅಭಿಯಾನ ಆರಂಭಿಸಿ, ಪ್ರಧಾನಿ ಮೋದಿಯವರ ವಿರುದ್ಧ ಟೀಕೆ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಮೋದಿ ಅವರು ಭಾರತದ ಲಕ್ಷ್ಯದ್ವೀಪವನ್ನು ಮಾಲ್ಡೀವ್ಸ್‌ಗಿಂತ ಸುಂದರ ಎಂದು ಹೇಳಿದ್ದರು. ಇದರಿಂದ ಮಾಲ್ಡೀವ್ಸ್‌ಗೆ ಹೋಗುವ ಭಾರತೀಯ ಪ್ರವಾಸಿಗರ ಸಂಖ್ಯೆ ಕಡಿಮೆಯಾಯಿತು, ಪ್ರವಾಸೋದ್ಯಮದ ಮೇಲೆ ಅವಲಂಬಿತವಾದ ದೇಶಕ್ಕೆ ಇದೊಂದು ದೊಡ್ಡ ಹೊಡೆತವಾಯಿತು.
ಇದೀಗ ಅಧ್ಯಕ್ಷ ಮೊಹಮ್ಮದ್ ಮುಯಿಝು ನೇತೃತ್ವದ ಮಾಲ್ಡೀವ್ಸ್ ಸರ್ಕಾರ, ಸಂಬಂಧಗಳನ್ನು ಸುಧಾರಿಸಿಕೊಂಡು ಮೋದಿ ಅವರನ್ನು ಗೌರವಪೂರ್ವಕವಾಗಿ ಆಹ್ವಾನಿಸಿದೆ. ಪ್ರಧಾನಿ ಮೋದಿ ಜುಲೈ 25 ಮತ್ತು 26 ರಂದು ಮಾಲ್ಡೀವ್ಸ್ ಪ್ರವಾಸ ಕೈಗೊಳ್ಳಲಿದ್ದಾರೆ.
ಈ ಭೇಟಿಯಿಂದ ಭಾರತ-ಮಾಲ್ಡೀವ್ಸ್ ನಡುವಿನ ನಂಟುಗಳು ಹಳೆಯ ಸ್ಥಿತಿಗೆ ಮರಳಿದ್ದು, ದ್ವಿಪಕ್ಷೀಯ ಸಹಕಾರ ಮತ್ತಷ್ಟು ಗಾಢವಾಗಲಿದೆ. ಭಾರತವು ‘ನೆರೆಹೊರೆ ಮೊದಲು’ ಹಾಗೂ ‘ವಿಷನ್ ಓಷನ್’ ನೀತಿಯಡಿ ಮಾಲ್ಡೀವ್ಸ್‌ಗೆ ಮಹತ್ವ ನೀಡುತ್ತಿದೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.
ಇದಕ್ಕೂ ಮುನ್ನ, ಅಕ್ಟೋಬರ್ 2024ರಲ್ಲಿ ಮುಯಿಝು ಅವರ ಭಾರತ ಭೇಟಿ ನಂತರ ಎರಡೂ ರಾಷ್ಟ್ರಗಳು ಸಂಬಂಧ ಸುಧಾರಣೆಯ ದಿಕ್ಕಿನಲ್ಲಿ ಕೆಲಸ ಆರಂಭಿಸಿದ್ದವು.
ಇದೇ ಸಮಯದಲ್ಲಿ ಪ್ರಧಾನಿ ಮೋದಿ ಅವರ ಲಂಡನ್ ಭೇಟಿಯ ಸಂದರ್ಭದಲ್ಲಿ ಭಾರತ ಮತ್ತು ಯುಕೆ ನಡುವಿನ ಮುಕ್ತ ವ್ಯಾಪಾರ ಒಪ್ಪಂದಕ್ಕೂ ಸಹಿ ಹಾಕುವ ನಿರೀಕ್ಷೆಯಿದೆ.