Nagarkurnool (Telangana): ತೆಲಂಗಾಣದ ನಾಗರಕರ್ನೂಲ್ ಜಿಲ್ಲೆಯಲ್ಲಿ ದೇವರ ದರ್ಶನಕ್ಕೆಂದು ಬಂದಿದ್ದ ಯುವತಿ ಮೇಲೆ ಕೆಲವು ಯುವಕರು ಸಾಮೂಹಿಕ ಅತ್ಯಾಚಾರ (gang-rape) ಎಸಗಿರುವ ಘಟನೆ ವರದಿಯಾಗಿದೆ.
ಮಹಬೂಬ್ ನಗರ ಜಿಲ್ಲೆಯ ಯುವತಿ ಶನಿವಾರ ಸಂಜೆ ಉರ್ಕೊಂಡಪೇಟೆ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ತಮ್ಮ ವ್ರತವನ್ನು ನೆರವೇರಿಸಲು ಸಂಬಂಧಿಕರೊಂದಿಗೆ ಆಗಮಿಸಿದ್ದರು. ದೇವರ ದರ್ಶನದ ನಂತರ ರಾತ್ರಿ ಅಲ್ಲೇ ವಾಸ್ತವ್ಯಕ್ಕೆ ತಯಾರಾಗಿದ್ದರು.
ಆಕೆಯು ದಿನನಿತ್ಯದ ವಿಧಿವಿಧಾನಕ್ಕಾಗಿ ಸಮೀಪದ ಗುಡ್ಡಕ್ಕೆ ಹೋದಾಗ, ಅಲ್ಲೇ ಅಡಗಿದ್ದ ಯುವಕರು ಹಲ್ಲೆ ನಡೆಸಿ, ಸಂಬಂಧಿಯನ್ನು ಹೊಡೆದು ಕೈಗಳನ್ನು ಕಟ್ಟಿ ಹಾಕಿ, ಯುವತಿಯನ್ನು ಬಲವಂತವಾಗಿ ಸಮೀಪದ ಗುಡ್ಡಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ.
ಪೊಲೀಸರು ಆರೋಪಿಗಳನ್ನು ಗುರುತಿಸಿದ್ದು, ಈ ಪೈಕಿ ಆರು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇನ್ನಿಬ್ಬರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.