ಅದಾನಿ ಗುಂಪಿನ ಅಧ್ಯಕ್ಷ ಗೌತಮ್ ಅದಾನಿ, (Gautam Adani) ವಿಯೆಟ್ನಾಂ (Vietnam) ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ ಟು ಲ್ಯಾಮ್ (Tu Lam) ಅವರನ್ನು ಭೇಟಿಯಾಗಿ, ಭಾರತ ಮತ್ತು ವಿಯೆಟ್ನಾಂ ನಡುವಿನ ಆರ್ಥಿಕ ಸಂಬಂಧಗಳನ್ನು ಬಲಪಡಿಸುವ ಕುರಿತು ಚರ್ಚೆ ನಡೆಸಿದರು. ಈ ಭೇಟಿಯ ನಂತರ ಎಕ್ಸ್ (ಹಳೆ ಟ್ವಿಟರ್) ನಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡ ಅವರು, ಲ್ಯಾಮ್ ಅವರ ದಿಟ್ಟ ಸುಧಾರಣೆಗಳು ಮತ್ತು ದೂರದೃಷ್ಟಿಯ ಕಾರ್ಯ ಯೋಜನೆಗೆ ಪ್ರಶಂಸೆ ವ್ಯಕ್ತಪಡಿಸಿದರು.
ಅದಾನಿಯವರು ಹೇಳಿದಂತೆ, ಈ ಭೇಟಿಯಿಂದ ವಿಯೆಟ್ನಾಂ ಇಂಧನ, ಬಂದರು, ಕೈಗಾರಿಕೆ ಹಾಗೂ ಲಾಜಿಸ್ಟಿಕ್ಸ್ ಕ್ಷೇತ್ರದಲ್ಲಿ ಪ್ರಮುಖ ನಾಯಕ ರಾಷ್ಟ್ರವಾಗುವ ಸಾಧ್ಯತೆ ಹೆಚ್ಚಾಗಿದೆ. ಅವರು ವಿಯೆಟ್ನಾಂನ ಅಭಿವೃದ್ಧಿಗೆ ಬೆಂಬಲ ನೀಡಲು ಮತ್ತು ಭಾರತ-ವಿಯೆಟ್ನಾಂ ಆರ್ಥಿಕ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲು ಅದಾನಿ ಗುಂಪು ಸಜ್ಜಾಗಿದೆ ಎಂದು ಹೇಳಿದ್ದಾರೆ.
ಭಾರತ ಮತ್ತು ವಿಯೆಟ್ನಾಂ ವರ್ಷಗಳಿನಿಂದ ಆರ್ಥಿಕ ಮತ್ತು ಕಾರ್ಯತಂತ್ರದ ಸಹಕಾರವನ್ನು ಹೊಂದಿವೆ. 2026ರ ಆರ್ಥಿಕ ವರ್ಷದ ವರದಿ ಪ್ರಕಾರ, ಇವರ ದ್ವಿಪಕ್ಷೀಯ ವ್ಯಾಪಾರ ಮೌಲ್ಯ 15.76 ಶತಕೋಟಿ ಡಾಲರ್ ಆಗಿದ್ದು, ಕಳೆದ ವರ್ಷಕ್ಕಿಂತ ಶೇ.6.4ರಷ್ಟು ಹೆಚ್ಚಾಗಿದೆ. ಭಾರತದಿಂದ ವಿಯೆಟ್ನಾಂಗೆ 5.43 ಶತಕೋಟಿ ಡಾಲರ್ ಮೌಲ್ಯದ ಸರಕುಗಳನ್ನು ರಫ್ತು ಮಾಡಲಾಗಿದೆ, ಮತ್ತು ವಿಯೆಟ್ನಾಂನಿಂದ ಭಾರತಕ್ಕೆ 10.33 ಶತಕೋಟಿ ಡಾಲರ್ ಮೌಲ್ಯದ ಸರಕುಗಳನ್ನು ಆಮದು ಮಾಡಲಾಗಿದೆ.
2025ರ ಆರ್ಥಿಕ ವರ್ಷದಲ್ಲಿ, ವಿಯೆಟ್ನಾಂ ಭಾರತದ 20ನೇ ಅತಿದೊಡ್ಡ ವ್ಯಾಪಾರ ಪಾಲುದಾರನಾಗಿದ್ದು, ಜಾಗತಿಕವಾಗಿ 15ನೇ ಅತಿದೊಡ್ಡ ರಫ್ತು ತಾಣವಾಗಿದೆ. ರಕ್ಷಣಾ ಸಹಕಾರ ಮತ್ತು ಕಡಲ ಸಂಚಾರದ ಕ್ಷೇತ್ರಗಳಲ್ಲಿಯೂ ಸಹಕಾರ ಹೆಚ್ಚುತ್ತಿದೆ.
ಇತ್ತೀಚೆಗೆ, ಭಾರತೀಯ ರಾಯಭಾರಿ ಸಂದೀಪ್ ಆರ್ಯ ಅವರು ವಿಯೆಟ್ನಾಂನ ಟಿಯೆನ್ ಸಾ ಬಂದರಿಗೆ ಭೇಟಿ ನೀಡಿದರು. ಭಾರತೀಯ ನೌಕಾ ಹಡಗುಗಳು ಕೂಡಾ ಈ ಬಂದರಿಗೆ ಭೇಟಿ ನೀಡಿದ್ದು, ಈ ಭಾಗದಲ್ಲಿನ ಭಾರತ-ವಿಯೆಟ್ನಾಂ ಸ್ನೇಹ ಸಂಬಂಧ ಬಲವಾಗುತ್ತಿರುವುದನ್ನು ತೋರಿಸುತ್ತದೆ.
ಇದೇ ತಿಂಗಳಲ್ಲಿ ಬ್ರೆಜಿಲ್‌ನಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಅವರು ವಿಯೆಟ್ನಾಂ ಪ್ರಧಾನಿ ಫಾಮ್ ಮಿನ್ಹ್ ಚಿನ್ ಅವರನ್ನು ಭೇಟಿಯಾದರು.