Deir al-Balah: ಗಾಜಾ (Gaza) ಪಟ್ಟಿಯಲ್ಲಿ ಇಸ್ರೇಲ್ ನಡೆಸಿದ ಹೊಸ ದಾಳಿಯಲ್ಲಿ ಸೋಮವಾರ 31 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಈ ಆರೋಪವನ್ನು ಇಸ್ರೇಲ್ ತಿರಸ್ಕರಿಸಿದೆ.
ಕಳೆದ ವಾರ ಗಾಜಾ ನಗರವನ್ನು ಯುದ್ಧ ವಲಯ ಎಂದು ಘೋಷಿಸಿದ ನಂತರ ವಾಯುದಾಳಿಗಳು ಹಾಗೂ ಫಿರಂಗಿ ಶೆಲ್ ದಾಳಿಗಳು ತೀವ್ರಗೊಂಡಿವೆ. ಜಬಲಿಯಾ ಶಿಬಿರ ಮತ್ತು ಹೊರವಲಯದ ಕಟ್ಟಡಗಳ ಮೇಲೆ ದಾಳಿಯಿಂದ ಜನರು ಆತಂಕಕ್ಕೀಡಾಗಿದ್ದಾರೆ. ವೈದ್ಯ ಸಯೀದ್ ಅಬು ಇಲೈಶ್ “ಇದು ಮತ್ತೊಂದು ಘೋರ ರಾತ್ರಿ” ಎಂದು ವಿವರಿಸಿದ್ದಾರೆ.
ಸೋಮವಾರದ ದಾಳಿಯಲ್ಲಿ ಸಾವನ್ನಪ್ಪಿದವರಲ್ಲಿ ಅರ್ಧಕ್ಕಿಂತ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳು. ಗಾಜಾ ನಗರದಲ್ಲೇ 13 ಮಂದಿ ಮೃತಪಟ್ಟಿದ್ದಾರೆ. ನಾಗರಿಕರ ಸಾವಿಗೆ ಹಮಾಸ್ ಕಾರಣವೆಂದು ಇಸ್ರೇಲ್ ಆರೋಪಿಸಿದೆ.
ಗಾಜಾ ನಿವಾಸಿಗಳು ಯುದ್ಧದ ಜೊತೆಗೆ ಹಸಿವಿನ ಕಾಡುವ ಸಮಸ್ಯೆಗೂ ಒಳಗಾಗಿದ್ದಾರೆ. ಪದೇಪದೇ ಸ್ಥಳಾಂತರವಾಗುವ ಪರಿಸ್ಥಿತಿಯ ನಡುವೆ ಆಹಾರ ಉತ್ಪಾದನೆ ಕುಸಿತಗೊಂಡಿದ್ದು, ಜನರು ಸಂಕಷ್ಟದಲ್ಲಿದ್ದಾರೆ.
ಇಲ್ಲಿಯವರೆಗೆ ಗಾಜಾ ಯುದ್ಧದಲ್ಲಿ 63,557 ಪ್ಯಾಲೆಸ್ತೇನಿಯರು ಮೃತಪಟ್ಟಿದ್ದು, 1,60,660 ಮಂದಿ ಗಾಯಗೊಂಡಿದ್ದಾರೆ ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ. ಸಾವನ್ನಪ್ಪಿದವರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳು.
ಅಂತರರಾಷ್ಟ್ರೀಯ ತಜ್ಞರು ಗಾಜಾದಲ್ಲಿ ಇಸ್ರೇಲ್ ನರಮೇಧ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ. ಆದರೆ, ಇಸ್ರೇಲ್ ಈ ಆರೋಪವನ್ನು ತಿರಸ್ಕರಿಸಿ, ಆತ್ಮರಕ್ಷಣೆಯ ಯುದ್ಧವಷ್ಟೇ ನಡೆಸುತ್ತಿದೆ ಎಂದು ಹೇಳಿದೆ.