New Delhi: ಈ ಹಣಕಾಸು ವರ್ಷದಲ್ಲಿಸಾಫ್ಟ್ವೇರ್ ಎಂಜಿನಿಯರುಗಳಿಗೆ (Software engineer) ಹೆಚ್ಚು ಉದ್ಯೋಗಾವಕಾಶ ಸಿಗಲಿದೆ. ಕಳೆದ ವರ್ಷ ಹೊಸ ನೇಮಕಾತಿಯನ್ನು ಅಳೆದು ತೂಗಿ ಮಾಡುತ್ತಿದ್ದ ಐಟಿ ಸೆಕ್ಟರ್ನ (IT sector) ಕಂಪನಿಗಳು ಈ ವರ್ಷ ಹೆಚ್ಚು ಮುಕ್ತವಾಗಿ ಮಾಡಲಿವೆ.
2024-25ರ ಹಣಕಾಸು ವರ್ಷದಲ್ಲಿ ಈ ವಲಯದಲ್ಲಿ ಹೊಸ ನೇಮಕಾತಿಯಲ್ಲಿ ಶೇ. 20 ರಿಂದ 25ರಷ್ಟು ಹೆಚ್ಚಳ ಆಗುವ ನಿರೀಕ್ಷೆ ಇದೆ ಎಂದು ಟೀಮ್ಲೀಸ್ ಡಿಜಿಟಲ್ (Teamless Digital) ಸಂಸ್ಥೆಯ ವರದಿಯೊಂದು ಹೇಳುತ್ತಿದೆ.
ಕೃತಕ ಬುದ್ಧಿಮತ್ತೆ (AI), ಯಂತ್ರ ಕಲಿಕೆ (machine learning), ಡಾಟಾ ಅನಾಲಿಟಿಕ್ಸ್ (ata analytics) ಇತ್ಯಾದಿ ನವೀನ ಕೌಶಲ್ಯಗಳನ್ನು ಹೊಂದಿದವರಿಗೆ ಉದ್ಯೋಗ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚುತ್ತಿದೆ.
ಇದರಿಂದಾಗಿ ಹೊಸ ನೇಮಕಾತಿ ಈ ವರ್ಷ ಗಣನೀಯವಾಗಿ ಹೆಚ್ಚುತ್ತಿದೆ.
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಮೆಷಿನ್ ಲರ್ನಿಂಗ್, ಆಟೊಮೇಶನ್ ಟೆಕ್ನಾಲಜಿಗೆ ಎಲ್ಲಿಲ್ಲದ ಮಹತ್ವ ಸೃಷ್ಟಿಯಾಗುತ್ತಿದ್ದು, ಆ ಕೌಶಲ್ಯಗಳ ಅಗತ್ಯತೆ ಹೆಚ್ಚಾಗಿದೆ. ಹೀಗಾಗಿ ಡಾಟಾ ಆಧಾರಿತ ಕೆಲಸಗಳಿಗೆ ಹೆಚ್ಚು ಬೇಡಿಕೆ ಇದೆ.
ಇದೇ ಕಾರಣಕ್ಕೆ ಡಾಟಾ ಸೈಂಟಿಸ್ಟ್ ಹುದ್ದೆಗಳಿಗೆ ಅವಕಾಶಗಳು ಹೆಚ್ಚಾಗಿವೆ. ಮೆಷಿನ್ ಲರ್ನಿಂಗ್ ಸ್ಕಿಲ್ಗಳ ಅಗತ್ಯ ಇದೆ ಎನ್ನುವ ಜಾಬ್ ಪೋಸ್ಟಿಂಗ್ಗಳೂ ಹೆಚ್ಚಾಗಿವೆ ಎಂದು ಟೀಮ್ಲೀಸ್ ಡಿಜಿಟಲ್ ಸಂಸ್ಥೆಯ ವಿಶ್ಲೇಷಣೆಯ ದತ್ತಾಂಶಗಳು ತಿಳಿಸುತ್ತವೆ.
ಪೈತಾನ್ ಪ್ರೋಗ್ರಾಮಿಂಗ್, ಎಥಿಕಲ್ ಹ್ಯಾಕಿಂಗ್, ಪೆನಿಟ್ರೇಶನ್ ಟೆಸ್ಟಿಂಗ್, ಎಜೈಲ್ ಸ್ಕ್ರಮ್ ಮಾಸ್ಟರ್, ಎಡಬ್ಲ್ಯುಎಸ್ ಸೆಕ್ಯೂರಿಟಿ, ಜಾವಾಸ್ಕ್ರಿಪ್ಟ್ ಮೊದಲಾದ ವಿದ್ಯೆಗಳನ್ನು ತಿಳಿದವರಿಗೂ ಬೇಡಿಕೆ ಹೆಚ್ಚುತ್ತಿದೆ ಎಂದು ಟೀಮ್ಲೀಸ್ ಡಿಜಿಟಲ್ ಸಂಸ್ಥೆ ಹೇಳುತ್ತಿದೆ.