
California: ಗೂಗಲ್ ಸಂಸ್ಥೆಯಲ್ಲಿ ಮತ್ತೆ ಉದ್ಯೋಗ ಕಡಿತ (Google layoffs) ನಡೆಯುತ್ತಿದೆ. ಗೂಗಲ್‌ನ “ಪ್ಲಾಟ್‌ಫಾರ್ಮ್‌ಗಳು ಮತ್ತು ಸಾಧನಗಳು” (Platforms and Devices) ವಿಭಾಗದಿಂದ ನೂರಾರು ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಲಾಗಿದೆ ಎಂದು ವರದಿಯಾಗಿದೆ.
ಈ ವಿಭಾಗದಲ್ಲಿ ಆಂಡ್ರಾಯ್ಡ್ ಸಾಫ್ಟ್‌ವೇರ್, ಪಿಕ್ಸೆಲ್ ಫೋನ್, ಕ್ರೋಮ್ ಬ್ರೌಸರ್‌ಗಳನ್ನು ನಿರ್ವಹಿಸುವ ತಂಡಗಳು ಇದ್ದವು. ಈ ತಂಡಗಳಲ್ಲಿ ಕೆಲಸ ಮಾಡುತ್ತಿದ್ದ ನೂರಾರು ಜನರಿಗೆ ಗೂಗಲ್ ಮ್ಯಾನೇಜ್ಮೆಂಟ್ ಲೇಆಫ್ ಬಗ್ಗೆ ತಿಳಿಸಿದೆ. ಆದರೆ ಈ ದಫಾ ಎಷ್ಟು ಜನರನ್ನು ಕೆಲಸದಿಂದ ತೆಗೆದಿದ್ದಾರೆ ಎಂಬ ಮಾಹಿತಿ ಇನ್ನೂ ಸ್ಪಷ್ಟವಾಗಿಲ್ಲ. ಗೂಗಲ್ ಈ ಬಗ್ಗೆ ಅಧಿಕೃತ ಪ್ರಕಟಣೆ ನೀಡಿಲ್ಲ.
ಇದೇ ಗೂಗಲ್ ಕಳೆದ ಕೆಲವು ತಿಂಗಳ ಹಿಂದೆ ಉದ್ಯೋಗಿಗಳಿಗೆ ಸ್ವ ಇಚ್ಛೆಯಿಂದ ಕೆಲಸ ಬಿಟ್ಟು ಹೋಗಲು ಅವಕಾಶ ನೀಡಿತ್ತು. ಅದೇ ವೇಳೆ ಇನ್ನಷ್ಟು ಲೇಆಫ್‌ಗಳ ಸಾಧ್ಯತೆ ಇದೆ ಎಂಬುದು ಸುಳಿವಾಗಿ ಕೇಳಿಬಂದಿತ್ತು.
ಗೂಗಲ್ ವಕ್ತಾರರ ಪ್ರಕಾರ, “ಪ್ಲಾಟ್‌ಫಾರ್ಮ್‌ಗಳು ಮತ್ತು ಸಾಧನಗಳ ತಂಡಗಳನ್ನು ಕಳೆದ ವರ್ಷ ಸೇರಿಸಿದಾಗಿನಿಂದ ಕಡಿಮೆ ಗಾತ್ರದಲ್ಲಿ ಹೆಚ್ಚು ಕಾರ್ಯಕ್ಷಮತೆಯ ಗುರಿ ಇಟ್ಟುಕೊಂಡಿದ್ದೇವೆ. ಜನವರಿಯಲ್ಲಿ ಸ್ವಚ್ಛಂದ ನಿರ್ಗಮನ ಯೋಜನೆ (Voluntary Exit Scheme) ಜೊತೆಗೆ ಕೆಲವು ಉದ್ಯೋಗಗಳನ್ನು ತೆಗೆಯಲಾಗಿತ್ತು,” ಎಂದಿದ್ದಾರೆ.
ಇದರಿಂದ ಗೂಗಲ್ ವೆಚ್ಚ ಕಡಿತ ಮತ್ತು ಕಾರ್ಯಚಟುವಟಿಕೆ ಪುನರ್ ರಚನೆಯತ್ತ ಹೆಜ್ಜೆ ಹಾಕುತ್ತಿದೆ. ಈ ಭಾಗವಾಗಿ ಲೇಆಫ್‌ಗಳು ಮತ್ತು ಸ್ವಚ್ಛಂದ ನಿರ್ಗಮನ ಯೋಜನೆಗಳು ಜಾರಿಗೆ ಬಂದಿವೆ.
2023ರಲ್ಲಿ ಟೆಕ್ ಉದ್ಯಮದಲ್ಲಿ ಲೇಆಫ್‌ಗಳ ಹಾವಳಿ ನಡೆಯುತ್ತಿದ್ದಾಗ, ಗೂಗಲ್ ಕೂಡ 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆಸಿತ್ತು. ಈ ಲೇಆಫ್ ಗೂಗಲ್‌ನ 6% ಸಿಬ್ಬಂದಿಗೆ ಹಾನಿ ಮಾಡಿತ್ತು. ಇದೇ ರೀತಿಯಾಗಿ ಮೆಟಾ ಮತ್ತು ಅಮೆಜಾನ್ ಕಂಪನಿಗಳೂ ಸಹ ಸಾವಿರಾರು ಜನರನ್ನು ಕೆಲಸದಿಂದ ವಜಾ ಮಾಡಿದ್ದವು.
2024 ಮತ್ತು 2025ರಲ್ಲಿ ಕೂಡ ಗೂಗಲ್ ನೂರಾರು ಉದ್ಯೋಗಿಗಳನ್ನು ಲೇಆಫ್ ಮಾಡಿದ್ದು, ಲೇಆಫ್‌ಗಳ ಕ್ರಮ ಮುಂದುವರೆದಿದೆ.