Bengaluru: “ಚುನಾವಣೆಗೆ ಮುನ್ನ ಕಾಂಗ್ರೆಸ್ ಬೆಲೆ ಏರಿಕೆ ಮಾಡುವುದಿಲ್ಲ, ಐದು ಗ್ಯಾರಂಟಿ ನೀಡುತ್ತೇವೆ ಎಂದು ಹೇಳಿತ್ತು. ಆದರೆ, ಕಳೆದ ಎರಡು ವರ್ಷಗಳಲ್ಲಿ ಹಾಲಿನ ದರವನ್ನು ಮೂರು ಬಾರಿ ಏರಿಸಲಾಗಿದೆ. ಸರ್ಕಾರದ (Government) ಬಳಿ ಅಭಿವೃದ್ಧಿಗೆ ಹಣವಿಲ್ಲ. ಆದ್ದರಿಂದ, ಜನರಿಂದ ಹಣ ಎಗರಿಸಲು ಬೆಲೆ ಏರಿಕೆ ಮೂಲಕ ಲೂಟಿ ಮಾಡುತ್ತಿದೆ” ಎಂದು ಬಿಜೆಪಿ ನಾಯಕ ಆರ್. ಅಶೋಕ್ ಆರೋಪಿಸಿದರು.
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿರುವ 24 ಗಂಟೆಯ ಧರಣಿಯಲ್ಲಿ ಭಾಗವಹಿಸಿದ ಅವರು, “ಬಜೆಟ್‌ನಲ್ಲಿ ತೆರಿಗೆ ತೋರಿಸದೆ, ಇದೀಗ ಜನರ ಮೇಲೆಯೇ ಬೆಲೆ ಏರಿಕೆ ಹೊರಿಸಲಾಗಿದೆ. ಐದು ಗ್ಯಾರಂಟಿ ಯೋಜನೆಗಾಗಿ ಕರ್ನಾಟಕದ ಮನೆ ಮನೆ ಲೂಟಿ ಮಾಡಲಾಗುತ್ತಿದೆ” ಎಂದು ಟೀಕಿಸಿದರು.
“ಸಚಿವರು ಅಂಗಡಿ ತೆರೆದಿದ್ದಾರೆ. 40% ಕಮಿಷನ್ ಆರೋಪಕ್ಕೆ ಸಾಕ್ಷಿ ಇಲ್ಲ, ಆದರೆ ಕಾಂಗ್ರೆಸ್ ಸರ್ಕಾರ 60% ಕಮಿಷನ್ ಪಡೆದುಕೊಳ್ಳುತ್ತಿದೆ. ಸ್ಮಾರ್ಟ್ ಮೀಟರ್ ಹಗರಣ ಕೂಡಾ ನಡೆದಿದೆ. ಸಿದ್ದರಾಮಯ್ಯ ಕೇವಲ ಹೆಸರಿಗೆ ಮುಖ್ಯಮಂತ್ರಿಯಾಗಿದ್ದಾರೆ, ಆದರೆ ಸರ್ಕಾರ ಸಂಪೂರ್ಣ ಗಾಲಿ ಕುರ್ಚಿಯಲ್ಲಿದೆ”
“ಕಾಂಗ್ರೆಸ್ ಸರ್ಕಾರ ವಕ್ಫ್ ಕಾಯ್ದೆಗೆ ತಿದ್ದುಪಡಿ ತಂದು, ಬೇರೆ ಯಾರ ಜಮೀನನ್ನಾದರೂ ವಕ್ಫ್ ಬೋರ್ಡ್ ಆಸ್ತಿ ಎಂದು ಘೋಷಿಸಲು ಅವಕಾಶ ನೀಡಿತ್ತು. ಇದರಿಂದ ರೈತರ ಜಮೀನು, ದೇವಸ್ಥಾನ, ಮಠ-ಮಂದಿರಗಳ ಆಸ್ತಿ ಕಬಳಿಕೆ ಆಗುತ್ತಿತ್ತು. ಆದರೆ, ಎನ್‌ಡಿಎ ಸರ್ಕಾರ ತಂದಿರುವ ತಿದ್ದುಪಡಿಯಿಂದ ರೈತರು ನಿಟ್ಟುಸಿರು ಬಿಡುವಂತಾಗಿದೆ” ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು, “ಲೋಕಸಭೆಯಲ್ಲಿ ಐತಿಹಾಸಿಕ ಮಸೂದೆ ಅಂಗೀಕರಿಸಲಾಗಿದೆ. ಆದರೆ, ಈ ಮಸೂದೆಯನ್ನು ಕಾಂಗ್ರೆಸ್ ವಿರೋಧಿಸುತ್ತಿರುವುದು ದುರಂತ. ಕರ್ನಾಟಕದಲ್ಲಿ ಸಾವಿರಾರು ಕೋಟಿ ರೂ. ಮೌಲ್ಯದ ಜಮೀನುಗಳನ್ನು ವಕ್ಫ್ ಬೋರ್ಡ್ ಹೆಸರಿನಲ್ಲಿ ಲೂಟಿ ಮಾಡಲಾಗಿದೆ”. ಎಂದು ಟೀಕಿಸಿದರು.