Bengaluru: ಪ್ಲಾಸ್ಟಿಕ್ (plastic) ಕೈ ಚೀಲಗಳ ಬಳಕೆಯನ್ನು ಕಡಿಮೆ ಮಾಡಬೇಕೆಂಬ ಉದ್ದೇಶದಿಂದ, ಸರ್ಕಾರವು ಭೂಮಿಯಲ್ಲಿ ಕರಗುವ ಕಾಂಪೋಸ್ಟಬಲ್ ಕೈ ಚೀಲಗಳ (compostable carry bags) ಉತ್ಪಾದನೆಗೆ ಪ್ರೋತ್ಸಾಹ ನೀಡಲು ನಿರ್ಧರಿಸಿದೆ. ಈ ನಿರ್ಧಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾಯಿತು.
ಕಾನೂನು ಸಚಿವ ಹೆಚ್.ಕೆ. ಪಾಟೀಲ್ ಅವರು ಈ ಬಗ್ಗೆ ಮಾಹಿತಿ ನೀಡುತ್ತಾ, ಪ್ಲಾಸ್ಟಿಕ್ ನಿಷೇಧ ಕುರಿತ ಅಧಿಸೂಚನೆಗಳಲ್ಲಿ “ಪ್ಲಾಸ್ಟಿಕ್ ಬ್ಯಾಗ್” ಎಂಬ ಪದಕ್ಕೆ ತಿದ್ದುಪಡಿ ಮಾಡಲಾಗುತ್ತಿದೆ ಎಂದರು. ಪ್ಲಾಸ್ಟಿಕ್ ತ್ಯಾಜ್ಯ ಸಮಸ್ಯೆಯನ್ನು ಕಡಿಮೆ ಮಾಡಲು ಹಾಗೂ ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಕಾಂಪೋಸ್ಟಬಲ್ ಚೀಲಗಳ ಉತ್ಪಾದನೆ ಮತ್ತು ಮಾರಾಟಕ್ಕೆ ಅವಕಾಶ ನೀಡಲಾಗುವುದು.
ಕಾಂಪೋಸ್ಟಬಲ್ ಬ್ಯಾಗ್‌ಗಳನ್ನು ತಯಾರಿಸಲು ಉತ್ಸುಕರಾದವರು, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಸಬೇಕು ಎಂದು ತಿಳಿಸಿದರು.
ಇತರೆ ಪ್ರಮುಖ ನಿರ್ಧಾರಗಳು
- ಕೊಡಗು ಜಿಲ್ಲೆಯ ಹುಲುಗುಂದ ಗ್ರಾಮದಲ್ಲಿ ಹಾರಂಗಿ ಜಲಾಶಯದ ಬಳಿ 36.50 ಕೋಟಿ ರೂ. ವೆಚ್ಚದಲ್ಲಿ ಕಮಾನು ಸೇತುವೆ ನಿರ್ಮಾಣಕ್ಕೆ ಹಾಗೂ ಕಾಲುವೆ ಅಭಿವೃದ್ಧಿಗೆ 49.90 ಕೋಟಿ ರೂ. ಮೊತ್ತದಲ್ಲಿ ಅನುಮೋದನೆ ನೀಡಲಾಗಿದೆ.
- ನ್ಯಾಯ ವಿಜ್ಞಾನ ಪ್ರಯೋಗಾಲಯಕ್ಕೆ 32 ಮೊಬೈಲ್ ಪೋರೆನ್ಸಿಕ್ ವಾಹನಗಳನ್ನು ಖರೀದಿಸಲು ಅನುಮೋದನೆ ನೀಡಲಾಗಿದೆ.
- ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ ಖಾಲಿ ಇರುವ ಉರ್ದು ಭಾಷಾ ಸಹಾಯಕ ಪ್ರಾಧ್ಯಾಪಕ ಹುದ್ದೆಗಳನ್ನು ಸಾಮಾನ್ಯ ಅಭ್ಯರ್ಥಿಗಳಿಂದ ಭರ್ತಿ ಮಾಡಲು ಸಮ್ಮತಿಸಲಾಗಿದೆ.
- ಕೃಷ್ಣಾ ಮೇಲ್ದಂಡೆ ಯೋಜನೆಯ ಹಂತ-3 ರ ಭೂಸ್ವಾಧೀನ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಹಾಗೂ ನೀರಾವರಿ ಉದ್ದೇಶಗಳಿಗಾಗಿ ಯೋಜನೆಯ ಅನುಮೋದನೆ ನೀಡಲಾಗಿದೆ.
ಇವುಗಳಿಂದ ಪರಿಸರ ರಕ್ಷಣೆಯ ಜೊತೆಸಹ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ವೇಗ ನೀಡಲು ಸರ್ಕಾರ ಮುಂದಾಗಿದೆ.