ಬೆಂಗಳೂರು: 38 ತಿಂಗಳ ಹಿಂಬಾಕಿ ವೇತನ, ಹೊಸ ವೇತನ ಪರಿಷ್ಕರಣೆ ಮತ್ತು 2021ರ ಮುಷ್ಕರದ ವೇಳೆ ವಜಾ ಆಗಿರುವ ನೌಕರರ ಮರು ನೇಮಕಾತಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸುತ್ತಿರುವ ಸಾರಿಗೆ ನೌಕರರ ಜಂಟಿ ಸಮಿತಿ, ಆಗಸ್ಟ್ 5ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ (employees’ strike) ಕರೆ ನೀಡಿದೆ.
KSRTC ಮತ್ತು BMTC ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳ ನೌಕರರು ಮುಷ್ಕರದಲ್ಲಿ ಭಾಗವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ನೋಡಿಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ.
ಸಾರಿಗೆ ಇಲಾಖೆ ಆಗಸ್ಟ್ 2ರಂದು ಖಾಸಗಿ ಬಸ್ ಮಾಲೀಕರೊಂದಿಗೆ ಸಭೆ ನಡೆಸಲು ನಿರ್ಧರಿಸಿದೆ. ಆಯುಕ್ತ ಯೋಗೀಶ್ ನೇತೃತ್ವದಲ್ಲಿ ಈ ಸಭೆ ಮಧ್ಯಾಹ್ನ 12 ಗಂಟೆಗೆ ಶಾಂತಿನಗರ ಕಚೇರಿಯಲ್ಲಿ ನಡೆಯಲಿದೆ. ಸರ್ಕಾರ, ನೌಕರರು ಮುಷ್ಕರ ನಡೆಸಿದರೆ ಖಾಸಗಿ ಬಸ್ ಸೇವೆ ಬಳಸಿ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಯೋಜನೆ ರೂಪಿಸುತ್ತಿದೆ.
ನೌಕರರ ಪ್ರಮುಖ ಬೇಡಿಕೆಗಳು
- 38 ತಿಂಗಳ ಹಿಂಬಾಕಿ ವೇತನ ಬಿಡುಗಡೆ
- ಹೊಸ ವೇತನ ಪರಿಷ್ಕರಣೆ
- ಮುಷ್ಕರದ ವೇಳೆ ವಜಾ ಮಾಡಿದ ನೌಕರರ ಮರು ನೇಮಕಾತಿ
ಇವುಗಳನ್ನು ತಕ್ಷಣ ಈಡೇರಿಸಬೇಕು ಎಂಬ ಒತ್ತಡವನ್ನು ನೌಕರರು ಹಾಕುತ್ತಿದ್ದಾರೆ. ಆಗದಿದ್ದರೆ ಬಸ್ ಸಂಚಾರ ಸ್ಥಗಿತಗೊಳಿಸಿ ಮುಷ್ಕರ ಖಚಿತ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
“ನಾವು ಎಸ್ಮಾ ಅಥವಾ ವಜಾಗೊಳಿಸುವ ಬೆದರಿಕೆಗೆ ಹೆದರಲ್ಲ. ಫ್ರೀಡಂ ಪಾರ್ಕ್ನಲ್ಲಿ ಉಪವಾಸ ಸತ್ಯಾಗ್ರಹ ಮಾಡುತ್ತೇವೆ” ಎಂದು ನೌಕರರು ತಿಳಿಸಿದ್ದಾರೆ.







