Mandya: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (H D Kumaraswamy) ಮತ್ತು ಕರ್ನಾಟಕ ಸರ್ಕಾರದ ನಡುವಿನ ಮುಸುಕಿನ ಗುದ್ದಾಟ ಮುಂದುವರಿದಂತಿದೆ. ಸರ್ಕಾರ ಪ್ರೋಟೋಕಾಲ್ ಪಾಲನೆ ಮಾಡದೆ ಕುಮಾರಸ್ವಾಮಿ ರಾಜ್ಯ ಪ್ರವಾಸದ ವೇಳೆ ನಿರ್ಲಕ್ಷ್ಯ ತೋರಿದೆ ಎಂಬ ಆರೋಪ ಕೇಳಿಬಂದಿದೆ.
ಕುಮಾರಸ್ವಾಮಿ ಎರಡು ದಿನಗಳ ರಾಜ್ಯ ಪ್ರವಾಸ ಕೈಗೊಂಡಿದ್ದು, ಅವರಿಗೆ ಸರ್ಕಾರದ ಕಾರು ನೀಡಲಾಗಿಲ್ಲ. ಈ ಘಟನೆಗೆ ಬೇಸರಗೊಂಡ ಕುಮಾರಸ್ವಾಮಿ, ಕೇಂದ್ರ ಸರ್ಕಾರದ ವಾಹನ ಬಳಸುತ್ತಿದ್ದಾರೆ. ಮಂಡ್ಯದ ಕೆ.ಆರ್.ಪೇಟೆಯಲ್ಲಿ ಅವರು ಸರ್ಕಾರದ ನಡೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
“ರಾಜ್ಯ ಸರ್ಕಾರ ಇನ್ನೂ ನನಗೆ ಕಾರು ನೀಡಿಲ್ಲ. ಹೀಗಾಗಿ ಕೇಂದ್ರ ಸರ್ಕಾರದ ವಾಹನ ಬಳಕೆ ಮಾಡುತ್ತಿದ್ದೇನೆ” ಎಂದು ಅವರು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ತವರು ಜಿಲ್ಲೆ ಮೈಸೂರಿನಲ್ಲಿ ಇಂದು ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ದಿಶಾ ಸಭೆ ನಡೆಯಲಿದೆ. ಬೆಳಿಗ್ಗೆ 11 ಗಂಟೆಗೆ ಮೈಸೂರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಭೆ ನಡೆಯಲಿದ್ದು, ಜೆಡಿಎಸ್ನ ಹಿರಿಯ ನಾಯಕ ಜಿಟಿ ದೇವೇಗೌಡ ಈ ಸಭೆಯಲ್ಲಿ ಭಾಗವಹಿಸುತ್ತಾರಾ ಎಂಬುದು ಕುತೂಹಲವಾಗಿದೆ.
ದಿಶಾ ಸಭೆ ನಂತರ ಸಂಜೆ 4 ಗಂಟೆಗೆ ಹೆಚ್.ಡಿ. ಕುಮಾರಸ್ವಾಮಿ, ಜೆಡಿಎಸ್ ಕಾರ್ಯಕರ್ತರೊಂದಿಗೆ ಮೈಸೂರಿನ ಸಾರಾ ಕನ್ವೆಂಷನ್ ಹಾಲ್ ನಲ್ಲಿ ಸಭೆ ನಡೆಸಲಿದ್ದಾರೆ. ಹಳೆಯ ಮೈಸೂರು ಭಾಗದಲ್ಲಿ ಪಕ್ಷವನ್ನು ಬಲಪಡಿಸಲು ಮತ್ತು ಸ್ಥಳೀಯ ಸಂಸ್ಥೆ ಚುನಾವಣೆಗೆ ತಯಾರಿಯಾಗಿ ಸಂಘಟನೆಯತ್ತ ಅವರ ದೃಷ್ಟಿ ಹಾರಿಸಿದೆ.