Bengaluru: ಕೈಗಾರಿಕಾ ಪ್ರದೇಶಗಳ ಮೇಲೆ ಗ್ರಾಮ ಪಂಚಾಯಿತಿಗಳಿಗೆ (Gram Panchayats) ತೆರಿಗೆ ವಿಧಿಸುವ ಅಧಿಕಾರವಿಲ್ಲ ಎಂದು ಕರ್ನಾಟಕ ಹೈಕೋರ್ಟ್ (High Court) ಸ್ಪಷ್ಟಪಡಿಸಿದೆ.
KIADB (ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ) ಅಭಿವೃದ್ಧಿಪಡಿಸಿದ ಕೈಗಾರಿಕಾ ಪ್ರದೇಶಗಳಲ್ಲಿ ಕೈಗಾರಿಕೆಗಳ ಮೇಲಿನ ಆಸ್ತಿ ತೆರಿಗೆಯನ್ನು ವಸೂಲಿ ಮಾಡಲು ಗ್ರಾಮ ಪಂಚಾಯಿತಿಗೆ ಯಾವುದೇ ಕಾನೂನು ಅಧಿಕಾರವಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.
ನೆಲಮಂಗಲದ ಸೋಂಪುರ ಕೈಗಾರಿಕಾ ಪ್ರದೇಶದಲ್ಲಿರುವ ಕಲ್ಪತರು ಬ್ರೂವರೀಸ್ ಮತ್ತು ಡಿಸ್ಟಿಲರೀಸ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ಸೋಂಪುರ ಗ್ರಾಮ ಪಂಚಾಯಿತಿ ಆಸ್ತಿ ತೆರಿಗೆ ನೋಟಿಸ್ ನೀಡಿತ್ತು. ಈ ಹಿನ್ನೆಲೆಯಲ್ಲಿ ಕಂಪನಿ ಹೈಕೋರ್ಟ್‌ಗೆ ದೂರು ನೀಡಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಂ ಅವರು, ಗ್ರಾಮ ಪಂಚಾಯಿತಿ ನೀಡಿದ ತೆರಿಗೆ ನೋಟಿಸುಗಳನ್ನು ರದ್ದುಗೊಳಿಸುವ ಆದೇಶ ನೀಡಿದ್ದಾರೆ.
1966ರ KIADB ಕಾಯಿದೆ ಪ್ರಕಾರ, ಕೈಗಾರಿಕಾ ಪ್ರದೇಶಗಳಲ್ಲಿ ಅಭಿವೃದ್ಧಿ, ನಿಯಂತ್ರಣ ಮತ್ತು ತೆರಿಗೆ ಸಂಗ್ರಹಣೆಯ ಅಧಿಕಾರ ಸಂಪೂರ್ಣವಾಗಿ ಕೆಐಎಡಿಬಿಗೆ ಮಾತ್ರ ಇರುತ್ತದೆ. ಗ್ರಾಮ ಪಂಚಾಯತಿಗೆ ಈ ಅಧಿಕಾರ ನೀಡಲು ನಿರ್ದಿಷ್ಟ ಅಧಿಸೂಚನೆಯ ಅಗತ್ಯವಿದೆ. ಅಂತಹ ಅಧಿಸೂಚನೆಯಿಲ್ಲದಿದ್ದರೆ, ಗ್ರಾಮ ಪಂಚಾಯಿತಿಗಳು ಯಾವುದೇ ರೀತಿಯಲ್ಲಿ ಈ ಪ್ರದೇಶಗಳ ಮೇಲೆ ಅಧಿಕಾರ ಚಲಾಯಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.
ರಾಜ್ಯ ಸರ್ಕಾರ ಕೆಐಎಡಿಬಿ ನಿಯಂತ್ರಣದಲ್ಲಿರುವ ಕೈಗಾರಿಕಾ ಪ್ರದೇಶವನ್ನು ಸ್ಥಳೀಯ ಸಂಸ್ಥೆಗಳಿಗೆ ವರ್ಗಾಯಿಸಿ ಅಧಿಸೂಚನೆ ನೀಡಿದರೆ ಮಾತ್ರ, ಗ್ರಾಮ ಪಂಚಾಯಿತಿಗೆ ನಿಯಂತ್ರಣ ಸಿಗುತ್ತದೆ. ಇದಿಲ್ಲದೆ, ಅಧಿಕಾರವನ್ನು ಆಕಸ್ಮಿಕವಾಗಿ ಅಥವಾ ಪರೋಕ್ಷವಾಗಿ ಬಳಸಲು ಅವಕಾಶವಿಲ್ಲ.
ಗ್ರಾಮ ಪಂಚಾಯತಿಗಳಿಗೆ ಕೆಐಎಡಿಬಿ ಅಭಿವೃದ್ಧಿಪಡಿಸಿದ ಕೈಗಾರಿಕಾ ಪ್ರದೇಶಗಳ ಮೇಲೆ ತೆರಿಗೆ ವಿಧಿಸಲು ಅಥವಾ ವಸೂಲಿ ಮಾಡಲು ಯಾವುದೇ ಹಕ್ಕು ಇಲ್ಲ. ಇದು ಕೇವಲ ಕೆಐಎಡಿಬಿಯ ಅಧಿಕಾರವಾಗಿದೆ ಎಂದು ಹೈಕೋರ್ಟ್ ಸ್ಪಷ್ಟವಾಗಿ ಹೇಳಿದೆ.