ಜ್ಞಾನೇಶ್ ಕುಮಾರ್ (Gyanesh Kumar) ಅವರು ಗೃಹ ಸಚಿವಾಲಯದಲ್ಲಿ ಐದು ವರ್ಷಗಳನ್ನು ಸೇವೆ ಸಲ್ಲಿಸಿದ್ದಾರೆ. 2016ರಿಂದ 2018 ರವರೆಗೆ ಜಂಟಿ ಕಾರ್ಯದರ್ಶಿಯಾಗಿ ಹಾಗೂ 2018 ರಿಂದ 2021 ರವರೆಗೆ ಹೆಚ್ಚುವರಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು.
ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಫೆಬ್ರವರಿ 17ರಂದು ಜ್ಞಾನೇಶ್ ಕುಮಾರ್ ಅವರನ್ನು ಮುಂದಿನ ಮುಖ್ಯ ಚುನಾವಣಾ ಆಯುಕ್ತರನ್ನಾಗಿ ನೇಮಿಸಿದ್ದಾರೆ. ಮಂಗಳವಾರದಂದು (ಫೆಬ್ರುವರಿ 18) 65 ವರ್ಷ ವಯಸ್ಸಿನ ರಾಜೀವ್ ಕುಮಾರ್ ಅವರ ಸ್ಥಾನಕ್ಕೆ ಜ್ಞಾನೇಶ್ ಕುಮಾರ್ ಅವರು ನೇಮಕವಾಗಲಿದ್ದಾರೆ. ಚುನಾವಣಾ ಆಯುಕ್ತರ ನೇಮಕಾತಿಯ ಹೊಸ ಕಾನೂನಿನಡಿಯಲ್ಲಿ ಈ ಹುದ್ದೆಗೆ ನೇಮಕಗೊಂಡ ಮೊದಲ ಸಿಇಸಿ ಎಂಬ ಹೆಗ್ಗಳಿಕೆಗೆ ಜ್ಞಾನೇಶ್ ಕುಮಾರ್ ಅವರು ಪಾತ್ರರಾದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಆಯ್ಕೆ ಸಮಿತಿ ಸಭೆ ನಡೆಸಿತು ಮತ್ತು ಜ್ಞಾನೇಶ್ ಕುಮಾರ್ ಅವರ ಹೆಸರನ್ನು ಅಂತಿಮಗೊಳಿಸಿತು.
1989ನೇ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿದ್ದ ಜ್ಞಾನೇಶ್ ಕುಮಾರ್ ಅವರು ಸುದೀರ್ಘ ಸೇವೆಯುಳ್ಳವರು. ಕಳೆದ ವರ್ಷ ಜನವರಿ ತಿಂಗಳಲ್ಲಿ ಸಹಕಾರ ಸಚಿವಾಲಯದ ಕಾರ್ಯದರ್ಶಿಯಾಗಿ ಇವರು ನಿವೃತ್ತರಾಗಿದ್ದರು. ಅವರು ಮೇ 2022 ರಿಂದ ಅಮಿತ್ ಶಾ ನೇತೃತ್ವದ ಸಚಿವಾಲಯದಲ್ಲಿ ಕಾರ್ಯದರ್ಶಿಯಾಗಿ ಸಹ ಕೆಲಸ ಮಾಡಿದರು. ಜ್ಞಾನೇಶ್ ಕುಮಾರ್ ಅವರು 2029 ರ ಜನವರಿ 26 ರವರೆಗೆ ಅಧಿಕಾರದಲ್ಲಿ ಇರುತ್ತಾರೆ.