Bengaluru: 2006ರಲ್ಲಿ ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ (H.D. Kumaraswamy) ಆಗಿದ್ದಾಗ ಹಲಗೆವಡೇರಹಳ್ಳಿ ಜಮೀನಿನ ಡಿನೋಟಿಫಿಕೇಷನ್ ಬಗ್ಗೆ ನಡೆದ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ.
ಎಂ. ಯೋಗಮೂರ್ತಿ ಸೇರಿದಂತೆ 13 ಮಂದಿ ಆರೋಪಿಗಳು ಪ್ರಕರಣ ರದ್ದುಪಡಿಸಬೇಕೆಂದು ಅರ್ಜಿ ಹಾಕಿದ್ದರು. ನ್ಯಾಯಮೂರ್ತಿ ಎಂ.ಐ. ಅರುಣ್ ಅವರ ಪೀಠ ಆ ಅರ್ಜಿಗಳನ್ನು ಅಂಗೀಕರಿಸಿದೆ. ಆದರೆ, ಮುಂದಿನ ವಿಚಾರಣೆಯಲ್ಲಿ ಸಾಕ್ಷಿ ಸಿಕ್ಕರೆ ಮತ್ತೆ ಆರೋಪಿಗಳನ್ನಾಗಿ ಸೇರಿಸಬಹುದು ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
2006ರಲ್ಲಿ ಬನಶಂಕರಿ 5ನೇ ಹಂತದ ಹಲಗೆವಡೇರಹಳ್ಳಿಯ 3 ಎಕರೆ 34 ಗುಂಟೆ ಜಮೀನನ್ನು ಬಿಡಿಎ ವಶಪಡಿಸಿಕೊಂಡಿತ್ತು. ಅದನ್ನು ನಿಯಮಬಾಹಿರವಾಗಿ ಡಿನೋಟಿಫೈ ಮಾಡಲಾಗಿದೆ ಎಂದು RTI ಕಾರ್ಯಕರ್ತ ಎಂ.ಎಸ್. ಮಹದೇವಸ್ವಾಮಿ ದೂರು ನೀಡಿದ್ದರು.
ಲೋಕಾಯುಕ್ತ ಪೊಲೀಸರು ತನಿಖೆ ನಡೆಸಿ 2019ರಲ್ಲಿ “ಬಿ ರಿಪೋರ್ಟ್” ಸಲ್ಲಿಸಿದ್ದರು. ಆದರೆ ವಿಶೇಷ ನ್ಯಾಯಾಲಯ ಆ ರಿಪೋರ್ಟ್ ತಳ್ಳಿಹಾಕಿ, ಕುಮಾರಸ್ವಾಮಿ ಸೇರಿ 19 ಮಂದಿಗೆ ಸಮನ್ಸ್ ಕಳುಹಿಸಿತ್ತು. ಇದನ್ನು ಪ್ರಶ್ನಿಸಿ 13 ಮಂದಿ ಹೈಕೋರ್ಟ್‌ಗೆ ಮೊರೆ ಹೋಗಿದ್ದರು.
ಹರಿಹರ ಶಾಸಕ ಬಿ.ಪಿ. ಹರೀಶ್ ಅವರು ಮಾದಿಗ ಸಮುದಾಯದ ಬಗ್ಗೆ ನೀಡಿದ ಹೇಳಿಕೆ ಸಂಬಂಧ ದಾಖಲಾಗಿದ್ದ ಪ್ರಕರಣವನ್ನೂ ಹೈಕೋರ್ಟ್ ರದ್ದುಪಡಿಸಿದೆ. 2023ರಲ್ಲಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಅವರು ಸಮನ್ಸ್ ಕಳುಹಿಸಿದ್ದರೂ, ಕಾನೂನು ಪ್ರಕ್ರಿಯೆ ಸರಿಯಾಗಿ ಪಾಲಿಸದ ಕಾರಣ ಆ ಆದೇಶವನ್ನು ಹೈಕೋರ್ಟ್ ತಿರಸ್ಕರಿಸಿದೆ. ಆದರೆ, ಪ್ರಕರಣವನ್ನು ಹೊಸದಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬಹುದು ಎಂದು ಕೋರ್ಟ್ ಸೂಚಿಸಿದೆ.