Bengaluru: ಈ ವರ್ಷದ ಹಾಸನಾಂಭ ಉತ್ಸವದಲ್ಲಿ (Hassanambha Utsav) VIP ಸಂಸ್ಕೃತಿಗೆ ತೆರೆ ಎಳೆದು, ಎಲ್ಲರಿಗೂ ಮುಕ್ತವಾಗಿರುವ ಜನಸ್ನೇಹಿ ಉತ್ಸವವಾಗಿ ಆಚರಿಸಲು ನಿರ್ಧಾರ ಕೈಗೊಂಡಿರುವುದಾಗಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಸೋಮವಾರ ವಿಕಾಸಸೌಧದಲ್ಲಿ ಹಾಸನ ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಜೊತೆ ಸಭೆ ನಡೆಸಿದ ನಂತರ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಹಾಸನಾಂಭ ಉತ್ಸವದಲ್ಲಿ ಕಳೆದ ವರ್ಷ ವಿಐಪಿಗಳ ಎಸ್ಕಾರ್ಟ್ ವಾಹನಗಳ ಸಂಚಾರದಿಂದ ಸಾಮಾನ್ಯರಿಗೆ ತೊಂದರೆ ಆಗಿದ್ದ ಕಾರಣ, ಈ ಬಾರಿ ಆ ಪದ್ಧತಿಗೆ ಅಂತ್ಯ ಮಾಡಲಾಗುತ್ತಿದೆ.
ರಾಜ್ಯಪಾಲರು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಗೃಹ ಸಚಿವರು, ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಮತ್ತು ಮಾಜಿ ಪ್ರಧಾನಿಗಳಿಗೆ ಮಾತ್ರ ಎಸ್ಕಾರ್ಟ್ ಸೌಲಭ್ಯ ಇರಲಿದೆ. ಉಳಿದ ಗಣ್ಯರು ತಮ್ಮ ಭೇಟಿ ಬಗ್ಗೆ ಮುಂಚಿತವಾಗಿ ಇಮೇಲ್ ಅಥವಾ ಫೋನ್ ಮೂಲಕ ತಿಳಿಸಿ, ಜಿಲ್ಲಾಡಳಿತದ ವಾಹನದ ಮೂಲಕ ದೇವರ ದರ್ಶನಕ್ಕೆ ಹೋಗಬೇಕಾಗುತ್ತದೆ.
ಗಣ್ಯರಿಗೆ ತಮ್ಮ ಕುಟುಂಬದ ನಾಲ್ಕು ಸದಸ್ಯರನ್ನು ಮಾತ್ರ ಜೊತೆ ಕರೆತರಲು ಅವಕಾಶ ನೀಡಲಾಗಿದೆ. ಯಾವುದೇ ಖಾಸಗಿ ವಾಹನಗಳ ಮೂಲಕ ದೇವಾಲಯ ಪ್ರವೇಶಕ್ಕೆ ಅನುಮತಿ ಇರುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ದೇವರ ದರ್ಶನಕ್ಕಾಗಿ ₹1000 ಮತ್ತು ₹300 ಮೌಲ್ಯದ ಪಾಸ್‌ಗಳನ್ನು ವಿತರಿಸಲಾಗುತ್ತದೆ. ಪಾಸ್ ಪಡೆದವರು ನಿಗದಿತ ಸಮಯದಲ್ಲಿ ಮಾತ್ರ ಪ್ರವೇಶ ಪಡೆಯುತ್ತಾರೆ – ಬೆಳಿಗ್ಗೆ 7.30 ರಿಂದ 10 ಗಂಟೆವರೆಗೆ ಸಾಮಾನ್ಯರಿಗೆ ಮತ್ತು 10.30 ರಿಂದ 12.30 ರವರೆಗೆ ವಿಐಪಿಗಳಿಗೆ ಅವಕಾಶ ಇರುತ್ತದೆ. ಪ್ರತಿದಿನ 1000 ಪಾಸ್‌ಗಳು ಮಾತ್ರ ಲಭ್ಯವಿರುತ್ತವೆ.
ಹಾಸನಾಂಭ ದೇವಾಲಯಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು, ಈ ಬಾರಿ ಸುಮಾರು 25 ಲಕ್ಷ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಎಲ್ಲ ಇಲಾಖೆಗಳ ಸಹಕಾರದೊಂದಿಗೆ ಜಿಲ್ಲಾಡಳಿತವು ಪೂರ್ಣ ಸಿದ್ಧತೆ ಮಾಡಿಕೊಂಡಿದೆ.
ಅಕ್ಟೋಬರ್ 9ರಿಂದ ಮೂರು ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಒಂದು ವೇದಿಕೆಯಲ್ಲಿ ಜಾನಪದ ಕಲಾವಿದರು ತಮ್ಮ ಪ್ರದರ್ಶನ ನೀಡಲಿದ್ದಾರೆ, ಉಳಿದ ವೇದಿಕೆಗಳಲ್ಲಿ ಸ್ಥಳೀಯ ಯುವಕರು ಹಾಗೂ ಕಲಾವಿದರು ಭಾಗವಹಿಸಲಿದ್ದಾರೆ.
ಇದಲ್ಲದೆ, ಟೆಲಿ ಟೂರಿಸಂ, ಫಲಪುಷ್ಪ ಪ್ರದರ್ಶನ, ಸ್ತ್ರೀ ಶಕ್ತಿ ಸಂಘಗಳ ಕರಕುಶಲ ಮೇಳ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಹಯೋಗದ ಹಾಸನಾಂಭ ಟೂರ್ ಪ್ಯಾಕೇಜ್ ಆರಂಭಿಸಲು ಯೋಜನೆ ಇದೆ.
ಜನಸಂದಣಿ ನಿಯಂತ್ರಣಕ್ಕಾಗಿ 2000 ಪೊಲೀಸರನ್ನು ನಿಯೋಜಿಸಲಾಗಿದ್ದು, 280 ಸಿಸಿಟಿವಿ ಕ್ಯಾಮರಾಗಳು ಹಾಗೂ ಡ್ರೋನ್ ನಿಗಾವ್ಯವಸ್ಥೆ ಅಳವಡಿಸಲಾಗಿದೆ. ಎಐ ತಂತ್ರಜ್ಞಾನ ಬಳಸಿ ಭದ್ರತೆಯ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ.