New York: ರಷ್ಯಾದಿಂದ ಅಗ್ಗದ ದರದಲ್ಲಿ ತೈಲ ಹಾಗೂ ಅನಿಲ ಖರೀದಿಸುತ್ತಿರುವ ಭಾರತ, ಚೀನಾ (India-China) ಮತ್ತು ಬ್ರೆಜಿಲ್‌ಗೆ ಅಮೆರಿಕ ಗಂಭೀರ ಎಚ್ಚರಿಕೆ ನೀಡಿದೆ. ಈ ದೇಶಗಳು ರಷ್ಯಾ ಜೊತೆ ವ್ಯಾಪಾರ ಮುಂದುವರಿಸಿದರೆ ಶೇ.500ರಷ್ಟು ಭಾರೀ ಸುಂಕ ವಿಧಿಸುವುದಾಗಿ ಅಮೆರಿಕದ ಕೆಲ ಸೆನೆಟರುಗಳು ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು “ಮತ್ತಷ್ಟು ದಿನಗಳಲ್ಲಿ ರಷ್ಯಾ ಶಾಂತಿ ಒಪ್ಪಂದಕ್ಕೆ ಬರದಿದ್ದರೆ, ಶೇ.100ರಷ್ಟು ಸುಂಕ ಹಾಕುತ್ತೇವೆ” ಎಂದು ಘೋಷಿಸಿದ ನಂತರ, ಸೆನೆಟರ್ ಲಿಂಡ್ಸೆ ಗ್ರಹಾಂ ಮತ್ತು ಬ್ಲೂಮೆಂಟರ್ ಭಾರತ ಹಾಗೂ ಇತರ ದೇಶಗಳ ವಿರುದ್ಧ ತೀವ್ರ ಟೀಕೆ ಮಾಡಿದ್ದಾರೆ.
ಅವರು “ಭಾರತ, ಚೀನಾ, ಬ್ರೆಜಿಲ್ ಮುಂತಾದ ದೇಶಗಳು ರಷ್ಯಾದಿಂದ ಅಗ್ಗದ ಇಂಧನ ಖರೀದಿ ಮೂಲಕ ಯುದ್ಧ ಪರಿಸ್ಥಿತಿಯ ಲಾಭ ಪಡೆಯುತ್ತಿವೆ. ಇಂತಹ ದೇಶಗಳ ಮೇಲೆ ಶೇ.500ರಷ್ಟು ಸುಂಕ ವಿಧಿಸಬೇಕೆಂಬುದು ನಮ್ಮ ನಿಲುವು” ಎಂದು ಹೇಳಿದರು.
ಟ್ರಂಪ್ ಅವರ ಈ ತೀರ್ಮಾನಕ್ಕೆ ಅವರು ಬೆಂಬಲ ವ್ಯಕ್ತಪಡಿಸಿದ್ದು, ಯುದ್ಧವನ್ನು ನಿಲ್ಲಿಸುವ ಒಂದು ತೀವ್ರ ಮಾರ್ಗವೇ ಇಂತಹ ಸುಂಕಗಳೇ ಎಂದು ಹೇಳಿದರು.
ಅಮೆರಿಕದ ಈ ಎಚ್ಚರಿಕೆಗೆ ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವ ಎಸ್. ಜೈಶಂಕರ್, ಸೆನೆಟರ್ ಗ್ರಹಾಂ ಅವರೊಂದಿಗೆ ಚರ್ಚೆ ನಡೆಸಿದ್ದು, ಭಾರತ ತನ್ನ ಇಂಧನ ಭದ್ರತೆ ಹಾಗೂ ಹಿತಾಸಕ್ತಿಗಳ ಕುರಿತಂತೆ ಸ್ಪಷ್ಟನೆ ನೀಡಿದೆ ಎಂದಿದ್ದಾರೆ. “ಅಮೆರಿಕ ಮಂಡಿಸಿರುವ ಮಸೂದೆ ಭಾರತಕ್ಕೆ ಎಷ್ಟು ಪರಿಣಾಮ ಬೀರುತ್ತದೆ ಎಂಬುದನ್ನು ನಾವು ವಿಶ್ಲೇಷಿಸುತ್ತಿದ್ದೇವೆ” ಎಂದು ಅವರು ತಿಳಿಸಿದ್ದಾರೆ.