Belagavi: ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರ (ಡಿಸಿಸಿ) ಬ್ಯಾಂಕ್‌ನ ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ರಮೇಶ ಕತ್ತಿ ಸ್ಪರ್ಧಿಸಿರುವ ಹುಕ್ಕೇರಿ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಪ್ರತಿನಿಧಿ ಮತಕ್ಷೇತ್ರದ ಚುನಾವಣೆಯನ್ನು ಧಾರವಾಡ ಹೈಕೋರ್ಟ್ ತಾತ್ಕಾಲಿಕವಾಗಿ ಮುಂದೂಡಿದೆ.
ಡಿಸಿಸಿ ಬ್ಯಾಂಕ್‌ನ 7 ನಿರ್ದೇಶಕ ಸ್ಥಾನಗಳಿಗೆ ಅಕ್ಟೋಬರ್ 19ರಂದು ಮತದಾನ ನಡೆಯಬೇಕಿತ್ತು. ಆದರೆ ಡೆಲಿಗೇಷನ್ (ಪ್ರತಿನಿಧಿಗಳ ಆಯ್ಕೆ) ಸಮಸ್ಯೆ ಕುರಿತು ಹುಕ್ಕೇರಿಯ ಮದಿಹಳ್ಳಿ ಪಿಕೆಪಿಎಸ್ ನಿರ್ದೇಶಕರೊಬ್ಬರು ಕೋರ್ಟ್ ಮೊರೆ ಹೋದ ಹಿನ್ನೆಲೆಯಲ್ಲಿ ಹೈಕೋರ್ಟ್ ಚುನಾವಣೆಯನ್ನು ತಡೆಹಿಡಿದಿದೆ.
ಮದಿಹಳ್ಳಿ ಪಿಕೆಪಿಎಸ್ನಲ್ಲಿ ಕೋರಂ ಇಲ್ಲದೆಯೇ ಡೆಲಿಗೇಷನ್ ಠರಾವು ಪಾಸ್ ಮಾಡಲಾಗಿದೆ ಎಂದು ನಿರ್ದೇಶಕ ಭೀಮಸೇನ ಬಾಗಿ ದೂರು ನೀಡಿದ್ದರು. ವಿಚಾರಣೆ ನಡೆಸಿದ ಧಾರವಾಡ ಹೈಕೋರ್ಟ್, ಮುಂದಿನ ಆದೇಶದವರೆಗೆ ಚುನಾವಣೆಯನ್ನು ಮುಂದೂಡಿ ತಾತ್ಕಾಲಿಕ ಆದೇಶ ನೀಡಿದೆ ಎಂದು ಹೆಚ್ಚುವರಿ ಸರ್ಕಾರಿ ವಕೀಲ ರಮೇಶ ಚಿಗರಿ ತಿಳಿಸಿದ್ದಾರೆ.
ಈ ಮದಿಹಳ್ಳಿ ಪಿಕೆಪಿಎಸ್ ನಲ್ಲೇ ನಡೆದ ಡೆಲಿಗೇಷನ್ ವಿವಾದದ ಸಮಯದಲ್ಲಿ, ಸಚಿವ ಸತೀಶ ಜಾರಕಿಹೊಳಿ ಅವರ ಸಮ್ಮುಖದಲ್ಲೇ ಮಹಿಳೆಯೊಬ್ಬರು ತಮ್ಮ ಪತಿಯಾದ ನಿರ್ದೇಶಕರಿಗೆ ಹೊಡೆದ ಘಟನೆ ನಡೆದಿತ್ತು. ಆ ಘಟನೆಯು ಆಗ ದೊಡ್ಡ ಸುದ್ದಿಯಾಗಿತ್ತು.
ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಈ ಬಾರಿ ಪ್ರಭಾವಿ ಜನಪ್ರತಿನಿಧಿಗಳ ಪ್ರತಿಷ್ಠೆಯ ಕದನ ಆಗಿದ್ದು, ರಾಜಕೀಯ ಬಣ್ಣ ಪಡೆದುಕೊಂಡಿದೆ. ಒಟ್ಟು 9 ಸ್ಥಾನಗಳಿಗೆ ಅವಿರೋಧ ಆಯ್ಕೆ ಆಗಿದ್ದು, ಉಳಿದ 7 ಸ್ಥಾನಗಳಿಗೆ ಅಕ್ಟೋಬರ್ 19ರಂದು ಬೆಳಗ್ಗೆ 9ರಿಂದ ಸಂಜೆ 4ರವರೆಗೆ ನಗರದಲ್ಲಿರುವ ಬಿ.ಕೆ. ಮಾಡೆಲ್ ಹೈಸ್ಕೂಲ್ ನಲ್ಲಿ ಮತದಾನ ನಡೆಯಲಿದೆ. ಫಲಿತಾಂಶವೂ ಅದೇ ದಿನ ಪ್ರಕಟವಾಗಲಿದೆ.
ಏಳು ಕ್ಷೇತ್ರಗಳಲ್ಲಿ ಒಟ್ಟು 676 ಮತದಾರರು ಮತ ಚಲಾಯಿಸಲಿದ್ದಾರೆ – ಅಥಣಿ 125, ಬೈಲಹೊಂಗಲ 73, ಹುಕ್ಕೇರಿ 90, ಕಿತ್ತೂರು 29, ನಿಪ್ಪಾಣಿ 119, ರಾಯಬಾಗ 205, ರಾಮದುರ್ಗ 105. ಏಳು ಸ್ಥಾನಗಳಿಗೆ 14 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಎಲ್ಲಾ ಮತಗಟ್ಟೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಹಾಗೂ ನಗರ ಪೊಲೀಸ್ ಆಯುಕ್ತ ಭೂಷಣ್ ಭೊರಸೆ ಅವರ ನೇತೃತ್ವದಲ್ಲಿ ಕಠಿಣ ಭದ್ರತೆ ವ್ಯವಸ್ಥೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಶ್ರವಣ ನಾಯಿಕ ತಿಳಿಸಿದ್ದಾರೆ.







