
Haridwar: ದೇಶದಾದ್ಯಂತ ಹೋಲಿಕಾ ದಹನ್‌ನೊಂದಿಗೆ ಹೋಳಿ ಹಬ್ಬದ ಸಂಭ್ರಮ ಆರಂಭವಾಗುತ್ತದೆ. ಹರಿದ್ವಾರದ ಪತಂಜಲಿ ವಿಶ್ವವಿದ್ಯಾಲಯದಲ್ಲಿ (Patanjali University) ಈ ವರ್ಷ ಬಣ್ಣಗಳ ಬದಲು ಹೂವಿನ ಹೋಳಿ ಆಚರಿಸಲಾಯಿತು.
ಯೋಗ ಗುರು ಸ್ವಾಮಿ ರಾಮದೇವ್ ಮತ್ತು ಕುಲಪತಿ ಆಚಾರ್ಯ ಬಾಲಕೃಷ್ಣ ಜನರಿಗೆ ಹೋಳಿ ಹಬ್ಬದ ಶುಭಾಶಯ ಕೋರಿದರು. ಈ ಹಬ್ಬವು ಬಣ್ಣಗಳ ಸಂಭ್ರಮ ಮಾತ್ರವಲ್ಲ, ಸಾಮಾಜಿಕ ಸಾಮರಸ್ಯ, ಪ್ರೀತಿ, ಸಹೋದರತ್ವ ಮತ್ತು ಸತ್ಯದ ಮಾರ್ಗವನ್ನು ಅನುಸರಿಸುವ ಸಂಕೇತವಾಗಿದೆ ಎಂದು ಅವರು ಹೇಳಿದರು.
ಸ್ವಾಮಿ ರಾಮದೇವ್ ಹೋಳಿ ಹಬ್ಬವನ್ನು ಪವಿತ್ರವಾಗಿ ಆಚರಿಸುವಂತೆ ಮನವಿ ಮಾಡಿದರು. ಗಾಂಜಾ ಹಾಗೂ ಮದ್ಯ ಸೇವನೆ ತಪ್ಪಿಸಲು ಮನವಿ ಮಾಡಿದ್ದು, ಹೂವುಗಳು ಮತ್ತು ಸಸ್ಯೋತ್ಪನ್ನ ಗುಲಾಲ್ ಬಳಸಿ ಹೋಳಿ ಆಡಲು ಕರೆ ನೀಡಿದರು.
ಹೋಳಿ ಹಬ್ಬ ಅಹಂಕಾರ ತ್ಯಜಿಸುವ ದಿನವೆಂದು ಆಚಾರ್ಯ ಬಾಲಕೃಷ್ಣ ಹೇಳಿದರು. ಭಿನ್ನಾಭಿಪ್ರಾಯಗಳನ್ನು ಮರೆತು, ಪ್ರೀತಿ ಮತ್ತು ಸಹೋದರತ್ವದ ಹಬ್ಬವನ್ನಾಗಿ ಮಾಡೋಣ ಎಂಬುದಾಗಿ ಅವರು ಉಲ್ಲೇಖಿಸಿದರು.
ಪತಂಜಲಿ ವಿಶ್ವವಿದ್ಯಾಲಯದಲ್ಲಿ ಹೋಳಿ ಹಬ್ಬದ ಅಂಗವಾಗಿ ವಿಶೇಷ ಯಾಗವೂ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಅಧಿಕಾರಿಗಳು, ನೌಕರರು, ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸನ್ಯಾಸಿಗಳು ಭಾಗವಹಿಸಿದರು.