Chennai: ತಮಿಳುನಾಡಿನ ಅಣ್ಣಾ ವಿಶ್ವವಿದ್ಯಾಲಯದಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣ ಇಂದು ವಿಧಾನಸಭೆಯಲ್ಲಿ ಭಾರಿ ಗದ್ದಲಕ್ಕೆ ಕಾರಣವಾಯಿತು. ಕಲಾಪದ ಆರಂಭದಲ್ಲೇ AIADMK ಸದಸ್ಯರು ಪ್ರಕರಣವನ್ನು ಪ್ರಸ್ತಾಪಿಸಿ ಗೊಂದಲ ಸೃಷ್ಠಿ ಮಾಡಿದ ನಂತರ, ಅವರನ್ನು ಸದನದಿಂದ ಹೊರಹಾಕಲಾಯಿತು.
ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ.ಪಳನಿಸ್ವಾಮಿ ನೇತೃತ್ವದಲ್ಲಿ ಶಾಸಕರು “ಅವರು ಯಾರು ಹೇಳಿ ಸರ್?” ಎಂಬ ಬರಹದ ಬ್ಯಾಡ್ಜ್ ಧರಿಸಿ ಸದನದೊಳಗೆ ಪ್ರವೇಶಿಸಿದರು. ಈ ಬ್ಯಾಡ್ಜ್‌ಗಳ ಮೂಲಕ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಭಾಗಿಯಾಗಿರುವ ಅಪರಿಚಿತ ವ್ಯಕ್ತಿ ಯಾರೆಂದು ಸರ್ಕಾರವನ್ನು ಪ್ರಶ್ನಿಸಲು ಇಚ್ಛಿಸಿದರು.
ಎಐಎಡಿಎಂಕೆ ಸದಸ್ಯರು ಡಿಎಂಕೆ ಸರ್ಕಾರದಿಂದ ಸ್ಪಷ್ಟನೆ ಕೇಳುತ್ತಾ ಘೋಷಣೆ ಕೂಗಿದ ಪರಿಣಾಮ, ಗದ್ದಲ ಹೆಚ್ಚಿತು. ಈ ಅಸ್ಥಿರ ಪರಿಸ್ಥಿತಿಯಲ್ಲಿ AIADMK ಸದಸ್ಯರನ್ನು ಹೊರಹಾಕಲು ಕ್ರಮ ಕೈಗೊಳ್ಳಲಾಯಿತು.
ಅಧಿವೇಶನದ ಆರಂಭಕ್ಕೆ ಮೊದಲು, ರಾಜ್ಯಪಾಲ ಆರ್.ಎನ್. ರವಿ, ರಾಷ್ಟ್ರಗೀತೆ ಹಾಡುವಂತೆ ಮನವಿ ಮಾಡಿದರು. ಆದರೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮತ್ತು ಸ್ಪೀಕರ್ ಎಂ.ಅಪ್ಪಾವು ಈ ಮನವಿಯನ್ನು ನಿರಾಕರಿಸಿದರು ಎಂದು ಆರೋಪಿಸಲಾಗಿದೆ.
ರಾಜಭವನ, ಈ ಘಟನೆಯನ್ನು “ಭಾರತದ ಸಂವಿಧಾನ ಮತ್ತು ರಾಷ್ಟ್ರಗೀತೆಗೆ ಅಗೌರವ” ಎಂದು ಕಠಿಣವಾಗಿ ಟೀಕಿಸಿದೆ. ರಾಜ್ಯಪಾಲರು ಈ ಘಟನೆ ಕುರಿತು ತೀವ್ರ ಬೇಸರ ವ್ಯಕ್ತಪಡಿಸಿ ಅಧಿವೇಶನದಿಂದ ಹೊರನಡೆದರು.
ಅಣ್ಣಾ ವಿಶ್ವವಿದ್ಯಾಲಯದಲ್ಲಿ ನಡೆದ ಅತ್ಯಾಚಾರ ಪ್ರಕರಣ ತಮಿಳುನಾಡು ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಸರ್ಕಾರದ ವಿರೋಧಿಗಳು ಈ ವಿಚಾರದಲ್ಲಿ ಡಿಎಂಕೆ ಸರ್ಕಾರದ ವೈಫಲ್ಯವನ್ನು ಹೈಲೈಟ್ ಮಾಡುತ್ತಿದ್ದಾರೆ.