
Bengaluru: ಹುಬ್ಬಳ್ಳಿಯ ಬಾಲಕಿ ಕೊಲೆ ಪ್ರಕರಣದ ಆರೋಪಿಯ ಎನ್ಕೌಂಟರ್ ತನಿಖೆಯನ್ನು (Hubballi Encounter) ಸಿಐಡಿಗೆ ವಹಿಸಲಾಗಿದೆ. ಈ ಬಗ್ಗೆ ತನಿಖಾ ವರದಿ ಏನು ಹೇಳುತ್ತದೆ ಎಂದು ಕಾಯೋಣ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.
ಬುಧವಾರ ಬೆಂಗಳೂರಿನ ಸದಾಶಿವನಗರದಲ್ಲಿರುವ ತಮ್ಮ ನಿವಾಸದ ಬಳಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, “ತನಿಖೆ ಮೂಲಕ ಸತ್ಯಾಂಶ ಬಯಲಿಗೆ ಬರುತ್ತದೆ,” ಎಂದು ತಿಳಿಸಿದರು.
ದಾವಣಗೆರೆಯಲ್ಲಿ ಮುಸ್ಲಿಂ ಮಹಿಳೆ ಮೇಲೆ ನಡೆದ ಹಲ್ಲೆ ಪ್ರಕರಣವನ್ನು ಸ್ಥಳೀಯ ಪೊಲೀಸರು ಗಂಭೀರವಾಗಿ ತೆಗೆದುಕೊಂಡಿದ್ದು, ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತಿದ್ದಾರೆ. “ಈ ರೀತಿಯ ಘಟನೆಗಳಿಗೆ ಯಾವುದೇ ಮುಲಾಜಿಲ್ಲದೆ ನಿಷ್ಠುರ ಕ್ರಮ ವಹಿಸಲು ನಾನು ಸೂಚಿಸಿದ್ದೇನೆ,” ಎಂದು ಹೇಳಿದರು.
ಮಹಿಳೆಯರ ಮೇಲೆ ಆಗುವ ಅತ್ಯಾಚಾರ ಹಾಗೂ ಹಲ್ಲೆ ಪ್ರಕರಣಗಳಲ್ಲಿ ಪೊಲೀಸ್ ಇಲಾಖೆ ಕಠಿಣ ಕ್ರಮ ತೆಗೆದುಕೊಳ್ಳುತ್ತಿದೆ. “ಯಾವುದೇ ಪ್ರಕರಣವನ್ನು ಲಘುವಾಗಿ ಪರಿಗಣಿಸಲಾಗಿಲ್ಲ. ಆರೋಪಿಗಳನ್ನು ಬಂಧಿಸಿ ಕಾನೂನು ಪ್ರಕಾರ ಕ್ರಮ ಜರಗಿಸಲಾಗಿದೆ,” ಎಂದರು.
ಟಾಟಾ ಟ್ರಸ್ಟ್ ನಡೆಸಿದ ಸಮೀಕ್ಷೆಯಲ್ಲಿ ಕರ್ನಾಟಕ ಪೊಲೀಸ್ ಮೊದಲ ಸ್ಥಾನ ಪಡೆದಿದೆ. “ಇದು ಪೊಲೀಸರ ಶ್ರಮಕ್ಕೆ ಸಿಕ್ಕಿರುವ ಗೌರವ,” ಎಂದು ಪರಮೇಶ್ವರ್ ಸಂತೋಷ ವ್ಯಕ್ತಪಡಿಸಿದರು.
ಒಕ್ಕಲಿಗ ಸಮುದಾಯದ ಸಭೆಯ ಬಗ್ಗೆ ಮಾಧ್ಯಮ ಪ್ರಶ್ನೆಗೆ ಉತ್ತರ ಅವರು ಹೇಳಿದರು, “ಈ ಸಭೆಯ ಬಗ್ಗೆ ನನಗೆ ಹೆಚ್ಚು ಮಾಹಿತಿ ಇಲ್ಲ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಸಭೆ ನಡೆದಿದ್ದು ಗೊತ್ತು, ಆದರೆ ಒಳಗಿನ ಚರ್ಚೆಯ ವಿಷಯಗಳು ತಿಳಿದಿಲ್ಲ,” ಎಂದರು.
“ಜಾತಿಗಣತಿ ವರದಿಯನ್ನು ಸಂಪುಟಕ್ಕೆ ನೀಡಲಾಗಿದೆ. ಅದನ್ನು ಓದಲು ಮತ್ತು ಸಮರ್ಥವಾಗಿ ಚರ್ಚಿಸಲು ಸಮಯ ಬೇಕು. ನಾಳೆಯ ಕ್ಯಾಬಿನೆಟ್ ಸಭೆಯಲ್ಲಿ ಭಾಗವಹಿಸಿ ನಮ್ಮ ಅಭಿಪ್ರಾಯವನ್ನು ಹೇಳುತ್ತೇವೆ. ಸರ್ಕಾರ ಅಂತಿಮ ನಿರ್ಧಾರ ತೆಗೆದುಕೊಳ್ಳುವುದು,” ಎಂದು ಪರಮೇಶ್ವರ್ ಸ್ಪಷ್ಟಪಡಿಸಿದರು.