Bengaluru: ಕೇಂದ್ರದ NDA ಸರ್ಕಾರ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಕೊಡಗೆ ನೀಡಿದೆ. ತುಟ್ಟಿಭತ್ಯೆ (Dearness Allowance DA) ಹೆಚ್ಚಳದ ಕುರಿತು ಬುಧವಾರ ಸರ್ಕಾರ ತೀರ್ಮಾನವನ್ನು ಕೈಗೊಂಡಿದೆ.
ಸಚಿವ ಸಂಪುಟ ಸಭೆಯಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಶೇ. 3ರಷ್ಟು ಹೆಚ್ಚುವರಿ ತುಟ್ಟಿಭತ್ಯೆ ಮತ್ತು ಪಿಂಚಣಿದಾರರಿಗೆ ತುಟ್ಟಿ ಪರಿಹಾರಕ್ಕೆ ಸಂಪುಟದ ಅನುಮೋದನೆ ಸಿಕ್ಕಿದೆ.
DA ಹೆಚ್ಚಳವು ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ-ಕೈಗಾರಿಕಾ ಕಾರ್ಮಿಕರ 12 ತಿಂಗಳ ಸರಾಸರಿಯನ್ನು ಆಧರಿಸಿದೆ ಎಂದು ಸಚಿವರು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಜುಲೈ 1, 2024ರಿಂದ ಕೇಂದ್ರ ಸರ್ಕಾರಿ ನೌಕರರಿಗೆ ಹೆಚ್ಚುವರಿ ಕಂತಿನ ತುಟ್ಟಿಭತ್ಯೆ (DA) ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆ ಪರಿಹಾರ (DR) ನೀಡಲು ಅನುಮೋದನೆ ನೀಡಿದೆ.
ಇದು ಪ್ರಸ್ತುತ ಮೂಲ ವೇತನ/ಪಿಂಚಣಿಯ ಶೇಕಡಾ 50ರ ದರಕ್ಕಿಂತ ಶೇಕಡಾ 3ರಷ್ಟು (3%) ಹೆಚ್ಚಳವಾಗಿದೆ. ಬೆಲೆ ಏರಿಕೆಯನ್ನು ಸರಿದೂಗಿಸಲು ಈ ಹೆಚ್ಚಳ ಅನುಕೂಲವಾಗಲಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ಈ ಹೆಚ್ಚಳವು 7ನೇ ಕೇಂದ್ರ ವೇತನ ಆಯೋಗದ ಶಿಫಾರಸುಗಳನ್ನು ಆಧರಿಸಿದ ಸ್ವೀಕಾರಾರ್ಹ ಸೂತ್ರಕ್ಕೆ ಅನುಗುಣವಾಗಿದೆ. ಡಿಎ ಮತ್ತು ಡಿಆರ್ ಎರಡರಿಂದಲೂ ಬೊಕ್ಕಸಕ್ಕೆ ವಾರ್ಷಿಕ 9,448.35 ಕೋಟಿ ರೂ. ಹೆಚ್ಚುವರಿ ಹೊರೆ ಬೀಳಲಿದ್ದು, ಸುಮಾರು 49.18 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 64.89 ಲಕ್ಷ ಪಿಂಚಣಿದಾರರಿಗೆ ಪ್ರಯೋಜನವಾಗಲಿದೆ.