![HAL-made light combat helicopters HAL-made light combat helicopters](https://kannadatopnews.com/wp-content/uploads/2025/02/Photoshop_Online-news-copy-123.jpg)
Bengaluru: ಹಿಂದೂಸ್ತಾನ್ ಏರೋನಾಟಿಕಲ್ ಲಿಮಿಟೆಡ್ (HAL) ಗಾಗಿ ಲಘು ಹಾಗೂ ಹಗುರ ಹೆಲಿಕಾಪ್ಟರ್ ಗಳ (helicopters) ತಯಾರಿಕೆಯಲ್ಲಿ ದೇಶ ಹಾಗೂ ವಿದೇಶಗಳಿಂದ ಬೇಡಿಕೆ ಹೆಚ್ಚಾಗಿದೆ. ಮುಂದಿನ ಆರು ತಿಂಗಳಲ್ಲಿ ಸಂಸ್ಥೆಯ ವಹಿವಾಟು 2.5 ಲಕ್ಷ ಕೋಟಿಗೆ ಹೆಚ್ಚಳವಾಗಲಿದೆ ಎಂದು ಸಂಸ್ಥೆಯ ಸಿಎಂಡಿ ಡಾ.ಡಿ.ಕೆ.ಸುನಿಲ್ ತಿಳಿಸಿದ್ದಾರೆ.
“ಈ ಆರ್ಥಿಕ ವರ್ಷದಲ್ಲಿ 55 ಸಾವಿರ ಕೋಟಿ ಮೊತ್ತದ ಆರ್ಡರ್‌ಗಳು ಬಂದಿವೆ. ಮುಂದಿನ ಐದು ತಿಂಗಳಲ್ಲಿ 1.2 ಲಕ್ಷ ಕೋಟಿಗೆ ಏರಿಕೆಯಾಗಿದ್ದು, ಒಟ್ಟಾರೆ 2.5 ಲಕ್ಷ ಕೋಟಿ ವಹಿವಾಟು ಆಗಲಿದೆ” ಎಂದು ಅವರು ಏರೋ ಇಂಡಿಯಾ ಪ್ರತಿನಿಧಿತ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
“ತೇಜಸ್ ಮತ್ತು ಪ್ರಚಂಡ್ ಲಘು ಯುದ್ಧ ಹೆಲಿಕಾಪ್ಟರ್ ಗಳ (ಎಲ್ಸಿಎ) ತಯಾರಿಕೆಗೆ ಹೆಚ್ಚಿದ ಬೇಡಿಕೆಯನ್ನು ಪೂರೈಸಲು 97 ತೇಜಸ್ ಮತ್ತು 156 ಎಲ್ಸಿಎ ಉತ್ಪಾದಿಸಲಾಗುತ್ತಿದೆ. ಬೇಡಿಕೆಗಳನ್ನು ಪೂರೈಸಲು ಹೆಲಿಕಾಪ್ಟರ್ ಗಳನ್ನು ಬೆಂಗಳೂರು, ಮಹಾರಾಷ್ಟ್ರದ ನಾಸಿಕ್ ಸೇರಿದಂತೆ ಮೂರು ಕಡೆಗಳಲ್ಲಿ ತ್ವರಿತಗತಿಯಲ್ಲಿ ನಿರ್ಮಿಸಲಾಗುತ್ತಿದೆ.”
“2026ರ ವೇಳೆಗೆ 26 ಏರ್ಕ್ರಾಫ್ಟ್ ತಯಾರಿಸುವ ಗುರಿ ಇಡಲಾಗಿದೆ. ಉತ್ಪಾದನೆ ವೇಗವನ್ನು ಹೆಚ್ಚಿಸಲು ಟಾಟಾ ಮತ್ತು ಎಲ್ ಅಂಡ್ ಟಿ ಕಂಪನಿಗಳೊಂದಿಗೆ ಒಪ್ಪಂದಗಳನ್ನು ಮಾಡಲಾಗಿದೆ. ಭಾರತೀಯ ಸೇನೆಗೆ ಅಲ್ಲದೆ, ಮಲೇಶಿಯಾ, ಫಿಲಿಪ್ಪಿನ್ಸ್, ಮತ್ತು ಉತ್ತರ ಅಮೇರಿಕಾದಿಂದಲೂ ಬೇಡಿಕೆ ಬರುತ್ತಿದೆ. 2,500 ಕೋಟಿ ರೂಪಾಯಿಗಳ ಸಂಶೋಧನೆ ಮತ್ತು ಅಭಿವೃದ್ಧಿ ವೆಚ್ಚವನ್ನು ಹೆಚ್ಚಿನ ತಂತ್ರಜ್ಞಾನ ಅಳವಡಿಸಲು ಮೀಸಲಿಡಲಾಗಿದೆ” ಎಂದು ಅವರು ವಿವರಿಸಿದ್ದಾರೆ.