Bengaluru: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ನಡೆಯಬೇಕಿದ್ದ ಭಾರತ ಮತ್ತು ನ್ಯೂಜಿಲೆಂಡ್ (India and New Zealand) ನಡುವಿನ ಮೊದಲ ಟೆಸ್ಟ್ ಪಂದ್ಯ (Test match) ಮಳೆಯಿಂದಾಗಿ ರದ್ದಾಗಿದೆ.
ಭಾರತ ಮತ್ತು ನ್ಯೂಜಿಲೆಂಡ್ (India and New Zealand) ನಡುವಿನ 3 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಬೆಂಗಳೂರಿನಲ್ಲಿ ಇಂದಿನಿಂದ ಅಂದರೆ ಬುಧವಾರ, ಅಕ್ಟೋಬರ್ 16 ರಿಂದ ಆರಂಭವಾಗಬೇಕಿತ್ತು. ಆದರೆ ಹವಾಮಾನ ವೈಪರಿತ್ಯದಿಂದಾಗಿ ಪಂದ್ಯದ ಮೊದಲ ದಿನದಾಟವನ್ನು ರದ್ದುಗೊಳಿಸಲಾಗಿದೆ.
ನಿಗದಿಯಂತೆ ಇಂದು ಮುಂಜಾನೆ 9 ಗಂಟೆಗೆ ಉಭಯ ತಂಡಗಳ ನಡುವೆ ಟಾಸ್ ನಡೆಯಬೇಕಿತ್ತು. ಆದರೆ ಮಳೆಯಿಂದಾಗಿ ಟಾಸ್ ಸಹ ನಡೆಯಲು ಸಾಧ್ಯವಾಗಲಿಲ್ಲ.
ನಿನ್ನೆಗೆ ಹೋಲಿಸಿದರೆ ಇಂದು ಬೆಂಗಳೂರಿನಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದೆಯಾದರೂ, ತುಂತುರು ಮಳೆ ಬೀಳುತ್ತಲೇ ಇದೆ.
ಹೀಗಾಗಿ ಮೊದಲ ದಿನದಾಟದ ಮೊದಲೆರಡು ಸೆಷನ್ಗಳವರೆಗೂ ಪಂದ್ಯವನ್ನು ನಡೆಸಲು ಕಾಯಲಾಯಿತು. ಆದರೆ ಆ ಬಳಿಕವೂ ಮಳೆ ನಿಲ್ಲದನ್ನು ಗಮನಿಸಿದ ಅಂಪೈರ್ಸ್, ದಿನದಾಟವನ್ನು ರದ್ದುಗೊಳಿಸಲು ಮುಂದಾದರು.
ಹವಾಮಾನ ವರದಿಯ ಪ್ರಕಾರ, ಅಕ್ಟೋಬರ್ 20ರವರೆಗೂ ಬೆಂಗಳೂರಿನಲ್ಲಿ ಮಳೆಯಾಗಲಿದೆ. ಈ ಪ್ರಕಾರ, ಉಭಯ ತಂಡಗಳ ನಡುವಿನ ಬೆಂಗಳೂರು ಟೆಸ್ಟ್ ಪಂದ್ಯ ಡ್ರಾದಲ್ಲಿ ಅಂತ್ಯಗೊಳ್ಳುವ ಸಾಧ್ಯತೆಯೇ ಹೆಚ್ಚಿದೆ.
ಆದಾಗ್ಯೂ ಮಳೆ ಬಿಡುವು ನೀಡಿದರೆ ಪಂದ್ಯ ಆರಂಭವಾಗಲು ಹೆಚ್ಚು ಸಮಯ ಹಿಡಿಯದು. ಏಕೆಂದರೆ ಚಿನ್ನಸ್ವಾಮಿ ಮೈದಾನದ ಒಳಚರಂಡಿ ವ್ಯವಸ್ಥೆ ಅತ್ಯಾಧುನಿಕವಾಗಿದ್ದು, ಮಳೆ ನಿಂತ 10 ನಿಮಿಷಕ್ಕೆ ಪಂದ್ಯವನ್ನು ಆರಂಭಿಸಬಹುದಾಗಿದೆ.