New Delhi: 2023ರಲ್ಲಿ ಸಿಖ್ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ನಂತರ ತೀವ್ರವಾಗಿ ಹದಗೆಟ್ಟಿದ್ದ ಭಾರತ-ಕೆನಡಾ ರಾಜತಾಂತ್ರಿಕ ಸಂಬಂಧಗಳನ್ನು ಪುನಃಸ್ಥಾಪಿಸುವತ್ತ ಎರಡೂ ದೇಶಗಳು ಮಹತ್ವದ ಹೆಜ್ಜೆ ಇಟ್ಟಿವೆ. ಇತ್ತೀಚಿನ ಬೆಳವಣಿಗೆಯಲ್ಲಿ, ಪರಸ್ಪರ ರಾಜಧಾನಿಗಳಿಗೆ ಹೊಸ ರಾಯಭಾರಿಗಳನ್ನು ನೇಮಿಸಲಾಗಿದೆ.
ಭಾರತವು ತನ್ನ ಅನುಭವಿ ರಾಜತಾಂತ್ರಿಕ ದಿನೇಶ್ ಕೆ. ಪಟ್ನಾಯಕ್ ಅವರನ್ನು ಕೆನಡಾದ ಒಟ್ಟಾವಾಗೆ ಹೈಕಮಿಷನರ್ ಆಗಿ ನೇಮಿಸಿದ್ದು, ಕೆನಡಾ ತನ್ನ ಹೊಸ ಹೈಕಮಿಷನರ್ ಆಗಿ ಕ್ರಿಸ್ಟೋಫರ್ ಕೂಟರ್ ಅವರನ್ನು ನವದೆಹಲಿಗೆ ಕಳುಹಿಸಲು ಘೋಷಿಸಿದೆ.
ಕೆನಡಾದ ವಿದೇಶಾಂಗ ಸಚಿವೆ ಅನಿತಾ ಆನಂದ್ ಹೇಳುವಂತೆ, ಈ ನೇಮಕವು ದ್ವಿಪಕ್ಷೀಯ ಸಹಕಾರವನ್ನು ಗಟ್ಟಿಗೊಳಿಸಲು ಮತ್ತು ಎರಡೂ ದೇಶಗಳ ನಾಗರಿಕರು ಹಾಗೂ ವ್ಯವಹಾರಗಳಿಗೆ ಅಗತ್ಯವಾದ ರಾಜತಾಂತ್ರಿಕ ಸೇವೆಗಳನ್ನು ಪುನಃಸ್ಥಾಪಿಸಲು ಪ್ರಮುಖ ಹೆಜ್ಜೆಯಾಗಿದೆ.
ಕೂಟರ್ ಅವರಿಗೆ 35 ವರ್ಷಗಳ ರಾಜತಾಂತ್ರಿಕ ಅನುಭವವಿದ್ದು, ಇಸ್ರೇಲ್, ದಕ್ಷಿಣ ಆಫ್ರಿಕಾ, ನಮೀಬಿಯಾ ಸೇರಿದಂತೆ ಹಲವಾರು ದೇಶಗಳಲ್ಲಿ ಸೇವೆ ಸಲ್ಲಿಸಿದ್ದಾರೆ. 1998-2000ರ ಅವಧಿಯಲ್ಲಿ ಅವರು ನವದೆಹಲಿಯ ಕೆನಡಾ ಹೈಕಮಿಷನ್ನಲ್ಲಿ ಮೊದಲ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದ್ದರು.
ಜೂನ್‌ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಮಾತುಕತೆ ನಡೆಸಿದ ನಂತರ, ರಾಯಭಾರಿಗಳನ್ನು ಪುನಃ ನಿಯೋಜಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿತ್ತು. ಈಗ ಅದಕ್ಕೆ ಜೀವ ಬಂದಿದೆ.
2023ರಲ್ಲಿ ಟ್ರುಡೊ ಸರ್ಕಾರ ಭಾರತವನ್ನು ನಿಜ್ಜರ್ ಹತ್ಯೆಯಲ್ಲಿ ಆರೋಪಿಸಿದ್ದರಿಂದ ಉಭಯ ದೇಶಗಳ ನಡುವೆ ಗಂಭೀರ ಉದ್ವಿಗ್ನತೆ ಉಂಟಾಯಿತು. ಅದರ ಪರಿಣಾಮವಾಗಿ, ಭಾರತ ಮತ್ತು ಕೆನಡಾ ಇಬ್ಬರೂ ತಮ್ಮ ತಮ್ಮ ರಾಜತಾಂತ್ರಿಕರನ್ನು ವಾಪಸ್ ಕರೆಸಿಕೊಂಡಿದ್ದರು. ಇದೀಗ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಂಬಂಧ ಪುನಃ ಸ್ಥಾಪನೆಯ ಮಾರ್ಗದಲ್ಲಿ ಸಾಗುತ್ತಿದೆ.