Delhi: ಭಾರತ-ಚೀನಾ ಗಡಿ (India-China border) ಸಮಸ್ಯೆ ಬಗ್ಗೆ 24ನೇ ವಿಶೇಷ ಸಭೆ ಇಂದು ದೆಹಲಿಯಲ್ಲಿ ನಡೆಯಿತು. ಈ ವೇಳೆ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಮುಖಾಮುಖಿಯಾಗಿ ಮಾತುಕತೆ ನಡೆಸಿದರು.
ಅಕ್ಟೋಬರಿನಲ್ಲಿ ಸೈನಿಕ ಬಿಕ್ಕಟ್ಟು ಶಮನವಾದ ನಂತರ ಗಡಿಯಲ್ಲಿ ಶಾಂತಿ ಇದೆ ಎಂದು ಅಜಿತ್ ದೋವಲ್ ಹೇಳಿದರು. ಚರ್ಚೆಯಲ್ಲಿ ಗಡಿ ಸಮಸ್ಯೆ ಮಾತ್ರವಲ್ಲದೆ, ಭಾರತ-ಚೀನಾ ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಕೂಡ ಸಮಾಲೋಚನೆ ನಡೆಯಿತು.
ವಾಂಗ್ ಯಿ ಎರಡು ದಿನಗಳ ಭಾರತ ಪ್ರವಾಸಕ್ಕೆ ಬಂದಿದ್ದು, ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರನ್ನು ಕೂಡ ಭೇಟಿಯಾದರು. ಈ ಮಾತುಕತೆಗಳು ಭಾರತ-ಚೀನಾ ಸಂಬಂಧಗಳಲ್ಲಿ ಹೊಸ ತಿರುವು ತರುವ ವಿಶ್ವಾಸ ವ್ಯಕ್ತವಾಗಿದೆ.
ಅಜಿತ್ ದೋವಲ್ ಹೇಳಿದರು: “ಈಗ ಎರಡೂ ದೇಶಗಳು ಗಡಿಯಲ್ಲಿ ಶಾಂತಿಯನ್ನು ಕಾಪಾಡಿಕೊಂಡಿವೆ ಮತ್ತು ಹಲವಾರು ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸುತ್ತಿವೆ. ಪ್ರಸ್ತುತ ಅಂತಾರಾಷ್ಟ್ರೀಯ ಸವಾಲುಗಳನ್ನು ಎರಡೂ ರಾಷ್ಟ್ರಗಳು ಒಟ್ಟಾಗಿ ಎದುರಿಸಬೇಕಿದೆ.”
ಅವರು ಮುಂದುವರೆದು, “ಪ್ರಧಾನಿ ನರೇಂದ್ರ ಮೋದಿ ಚೀನಾದಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಸ್ಥೆಯ ಶೃಂಗಸಭೆಯಲ್ಲಿ ಭಾಗವಹಿಸಲು ಎದುರು ನೋಡುತ್ತಿದ್ದಾರೆ. ಇದರಿಂದ ಭಾರತ-ಚೀನಾ ಸಂಬಂಧಗಳಲ್ಲಿ ಹೊಸ ಬೆಳವಣಿಗೆಗಳು ಸಾಧ್ಯ” ಎಂದರು.