
Washington: ಶ್ವೇತಭವನದ ವ್ಯಾಪಾರ ಸಲಹೆಗಾರ ಪೀಟರ್ ನವರೋ, (US adviser Navarro) ಭಾರತವು ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರೊಂದಿಗೆ ಸ್ನೇಹ ಬೆಳೆಸುತ್ತಿರುವುದನ್ನೂ, ರಷ್ಯಾದ ತೈಲವನ್ನು (Russian oil) ರಿಯಾಯಿತಿ ದರದಲ್ಲಿ ಖರೀದಿಸಿ ಲಾಭ ಗಳಿಸುತ್ತಿರುವುದನ್ನೂ ಟೀಕಿಸಿದ್ದಾರೆ. ಭಾರತ ಕ್ರೆಮ್ಲಿನ್‌ಗೆ “ಲಾಂಡ್ರೋಮ್ಯಾಟ್” ಆಗಿ ಕೆಲಸ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ನವರೋ ಪ್ರಕಾರ, ಭಾರತ ರಷ್ಯಾದಿಂದ ಕಚ್ಚಾ ತೈಲ ಖರೀದಿಸಿ, ಅದನ್ನು ಸಂಸ್ಕರಿಸಿ ಯುರೋಪ್, ಆಫ್ರಿಕಾ ಮತ್ತು ಏಷ್ಯಾಕ್ಕೆ ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿದೆ. ಇದರಿಂದ ರಷ್ಯಾ ತನ್ನ ಉಕ್ರೇನ್ ಯುದ್ಧಕ್ಕೆ ಹಣಕಾಸು ಒದಗಿಸಿಕೊಂಡಿದೆ. ಮೋದಿ ಒಳ್ಳೆಯ ನಾಯಕ, ಆದರೆ ಭಾರತ ತನ್ನ ಜಾಗತಿಕ ಪಾತ್ರವನ್ನು ಅರಿತುಕೊಳ್ಳಬೇಕು ಎಂದು ನವರೋ ಅಭಿಪ್ರಾಯಪಟ್ಟಿದ್ದಾರೆ.
ಅಮೆರಿಕದ ರಾಯಭಾರಿ ನಿಕ್ಕಿ ಹ್ಯಾಲಿ, ಚೀನಾದ ಪ್ರಭಾವಕ್ಕೆ ತಡೆ ನೀಡಲು ಭಾರತ ಅಮೆರಿಕದ ಪ್ರಮುಖ ಪ್ರಜಾಪ್ರಭುತ್ವ ಪಾಲುದಾರ ಎಂದು ಹೇಳಿದ್ದಾರೆ. ಅಮೆರಿಕ–ಭಾರತ ಸಂಬಂಧ ಹಾಳಾಗುವುದು ಕಾರ್ಯತಂತ್ರದ ವಿಪತ್ತು ಎಂದು ಅವರು ಎಚ್ಚರಿಸಿದ್ದಾರೆ.
ಅಮೆರಿಕ ಭಾರತಕ್ಕೆ ಹೆಚ್ಚುವರಿ ಸುಂಕ ವಿಧಿಸಿರುವುದನ್ನು ಅರ್ಥಶಾಸ್ತ್ರಜ್ಞ ಜೆಫ್ರಿ ಸ್ಯಾಚ್ಸ್ ತೀವ್ರವಾಗಿ ಟೀಕಿಸಿದ್ದಾರೆ. ಇದು ಅಮೆರಿಕದ ವಿದೇಶಾಂಗ ನೀತಿಗೆ ಸ್ವಯಂವಿನಾಶಕಾರಿ ಹೆಜ್ಜೆ ಎಂದು ಅವರು ಹೇಳಿದ್ದಾರೆ. ಈ ಸುಂಕಗಳು ಅಮೆರಿಕ–ಭಾರತ ಸಂಬಂಧ ಹಾಳು ಮಾಡುವುದರೊಂದಿಗೆ ಬ್ರಿಕ್ಸ್ ದೇಶಗಳನ್ನು ಮತ್ತಷ್ಟು ಒಗ್ಗೂಡಿಸುತ್ತವೆ ಎಂದಿದ್ದಾರೆ.
ನವದೆಹಲಿಯ ರಷ್ಯಾದ ರಾಯಭಾರ ಕಚೇರಿ ಅಮೆರಿಕದ ಸುಂಕಗಳನ್ನು ನ್ಯಾಯಸಮ್ಮತವಲ್ಲ ಮತ್ತು ಏಕಪಕ್ಷೀಯ ಎಂದು ಟೀಕಿಸಿದೆ. ಇವು ಜಾಗತಿಕ ಮಾರುಕಟ್ಟೆ ಮತ್ತು ಪೂರೈಕೆ ಸರಪಳಿಯನ್ನು ಅಸ್ಥಿರಗೊಳಿಸುತ್ತವೆ ಎಂದು ಅಭಿಪ್ರಾಯಪಟ್ಟಿದೆ.
ಫೆಬ್ರವರಿ 2022 ರ ಮೊದಲು ಭಾರತವು ರಷ್ಯಾದ ತೈಲ ಬಹಳ ಕಡಿಮೆ ಪ್ರಮಾಣದಲ್ಲಿ ಖರೀದಿಸುತ್ತಿತ್ತು. ಈಗ ಅದು 35–40% ರಷ್ಟು ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಆದರೆ ನವರೋ ಪ್ರಕಾರ, ಭಾರತಕ್ಕೆ ರಷ್ಯಾದ ತೈಲದ ಅಗತ್ಯವಿಲ್ಲ; ಇದು ಕೇವಲ ಲಾಭಕ್ಕಾಗಿ ನಡೆಯುತ್ತಿರುವ ವ್ಯಾಪಾರ.
ಭಾರತವು ರಷ್ಯಾದ ತೈಲವನ್ನು ನಿರಂತರವಾಗಿ ಆಮದು ಮಾಡಿಕೊಳ್ಳುತ್ತಿರುವ ಕಾರಣ ಅಮೆರಿಕವು ಭಾರತೀಯ ಸರಕುಗಳ ಮೇಲೆ ಒಟ್ಟು 50% ರಷ್ಟು ಸುಂಕ ವಿಧಿಸಿದೆ. ಇದು ಅಮೆರಿಕನ್ ಕಾರ್ಮಿಕರಿಗೆ ಹಾನಿಯಾಗಿದೆ, ಜೊತೆಗೆ ಆ ಹಣದಿಂದ ರಷ್ಯಾ ಯುದ್ಧಾಸ್ತ್ರಗಳನ್ನು ತಯಾರಿಸಿ ಉಕ್ರೇನ್ ವಿರುದ್ಧ ಬಳಸುತ್ತಿದೆ ಎಂದು ನವರೋ ಹೇಳಿದ್ದಾರೆ.