New Delhi: ಮುಂಬರುವ ವರ್ಷಗಳಲ್ಲಿ ತನ್ನ ಕಂಪನಿಯ ಬೆಳವಣಿಗೆಗೆ ಭಾರತವೇ ಆಧಾರವಾಗಿರಲಿದೆ ಎಂದು ಸ್ವಿಟ್ಜರ್ಲ್ಯಾಂಡ್ (Switzerland) ಮೂಲದ SIG ಗ್ರೂಪ್ ಸಂಸ್ಥೆಯ CEO ಸ್ಯಾಮುಯಲ್ ಸಿಗ್ರಿಸ್ಟ್ (Samuel Sigrist) ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ್ದ ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಭಾರತದಲ್ಲಿ ತಮ್ಮ ಕಂಪನಿಯ ವ್ಯವಹಾರಗಳ ಬಗ್ಗೆ ಒಂದಷ್ಟು ಮಾಹಿತಿ ಹಂಚಿಕೊಂಡಿದ್ದಾರೆ.
ಕಳೆದ ಕೆಲ ವರ್ಷಗಳಲ್ಲಿ ತಮ್ಮ ಕಂಪನಿಯು ಭಾರತದಲ್ಲಿ ಒಳ್ಳೆಯ ಬುನಾದಿ ಹಾಕಿದೆ. ಹಲವು ಪ್ರಮುಖ ಡೈರಿ ಮತ್ತು ಪಾನೀಯ ಕಂಪನಿಗಳ ಜೊತೆ ಹೊಂದಾಣಿಕೆ ಮಡಿಕೊಂಡು ತನ್ನ ನೆಟ್ವರ್ಕ್ ಬಲಪಡಿಸಿಕೊಂಡಿದೆ ಎಂದು ಅವರು ಹೇಳಿದ್ದಾರೆ.
ಸ್ವಿಟ್ಜರ್ಲ್ಯಾಂಡ್ ಮೂಲದ ಎಸ್ಐಜಿ ಸಂಸ್ಥೆ ಉತ್ಕೃಷ್ಟ ಗುಣಮಟ್ಟದ ಕಾರ್ಟನ್ ಪ್ಯಾಕ್ಗಳನ್ನು ತಯಾರಿಸುತ್ತದೆ. ಹಾಲು, ಪೆಪ್ಸಿ, ಕೋಕಾಕೋಲ ಇತ್ಯಾದಿ ದ್ರವ ಉತ್ಪನ್ನಗಳಿಗೆ ಟೆಟ್ರಾಪ್ಯಾಕ್ ಇತ್ಯಾದಿ ಕಾರ್ಟನ್ ಪ್ಯಾಕ್ ಒದಗಿಸುತ್ತದೆ. ಭಾರತದಲ್ಲಿ ಅಮುಲ್, ಪಾರ್ಲೆ ಆಗ್ರೋ, ಕೋಕಾ ಕೋಲಾ, ಪೆಪ್ಸಿಕೋ, ಮಿಲ್ಕಿ ಇಸ್ಟ್, ಹಮ್ದರ್ದ್ ಮೊದಲಾದ ಪ್ರಮುಖ ಪಾನೀಯ ಕಂಪನಿಗಳ ಜೊತೆ ಎಸ್ಐಜಿ ಸಹಯೋಗ ಹೊಂದಿದೆ.
ಭಾರತದಲ್ಲಿಯಷ್ಟು ವೇಗವಾಗಿ ಬಿಸಿನೆಸ್ ಸ್ಥಾಪನೆ ನಮಗೆ ಬೇರಾವ ಮಾರುಕಟ್ಟೆಯಲ್ಲೂ ಸಾಧ್ಯವಾಗಿರಲಿಲ್ಲ. ಪಾರ್ಲೆ ಮತ್ತು ಅಮುಲ್ ಸಂಸ್ಥೆ ನಮ್ಮ ಶ್ರೇಷ್ಠ ತಂತ್ರಜ್ಞಾನವನ್ನು ಬಹಳ ಬೇಗ ಅಳವಡಿಸಿಕೊಂಡಿದ್ದರಿಂದ ಇದು ಸಾಧ್ಯವಾಯಿತು ಎಂದೂ ಅವರು ಹೇಳಿದ್ದಾರೆ.
ಸ್ಯಾಮುಯಲ್ ಸಿಗ್ರಿಸ್ಟ್ ಅವರು ತಮ್ಮ ಕಂಪನಿ ಸಾಧ್ಯವಾದಷ್ಟೂ ಪರಿಸರಸ್ನೇಹಿ ಉತ್ಪನ್ನಕ್ಕೆ ಒತ್ತು ಕೊಡುತ್ತದೆ ಎಂದಿದ್ದಾರೆ. ಪರಿಸರಕ್ಕೆ ಹಾನಿಯಾಗುವ ಅಲೂಮಿನಿಯಮ್ ಫಾಯಿಲ್ ಅನ್ನು ಬಳಸುವುದಿಲ್ಲ. ತಮ್ಮ ಪಾನೀಯ ಕಾರ್ಟನ್ಗಳನ್ನು ಪೂರ್ಣವಾಗಿ ರೀಸೈಕಲ್ ಮಾಡಬಹುದು ಎನ್ನುತ್ತಾರೆ ಎಸ್ಐಜಿ ಸಿಇಒ.