New Delhi: ಭಾರತ ಮತ್ತು ಇಸ್ರೇಲ್ (India-Israel) ನಡುವಿನ ದ್ವಿಪಕ್ಷೀಯ ಸಂಬಂಧ ಬಲಗೊಳಿಸಲು ಇಸ್ರೇಲ್ ಹಣಕಾಸು ಸಚಿವ ಬೆಜಲೆಲ್ ಸ್ಮೋಟ್ರಿಚ್ ನೇತೃತ್ವದ ನಿಯೋಗ ಭಾರತಕ್ಕೆ ಬಂದಿದೆ. ಮೂರು ದಿನಗಳ ಪ್ರವಾಸದ ವೇಳೆ ಭಾರತ-ಇಸ್ರೇಲ್ ದ್ವಿಪಕ್ಷೀಯ ಹೂಡಿಕೆ ಒಪ್ಪಂದಕ್ಕೆ (BIT) ಸಹಿ ಹಾಕುವ ನಿರೀಕ್ಷೆಯಿದೆ. ಈ ಒಪ್ಪಂದವು ಮುಂದಿನ ದಿನಗಳಲ್ಲಿ ಮುಕ್ತ ವ್ಯಾಪಾರ ಒಪ್ಪಂದಕ್ಕೆ (FTA) ದಾರಿ ಮಾಡಿಕೊಡಲಿದೆ.
ಸ್ಮೋಟ್ರಿಚ್ ಅವರು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ವಾಣಿಜ್ಯ ಸಚಿವ ಪಿಯೂಷ್ ಗೋಯೆಲ್ ಹಾಗೂ ವಸತಿ ಮತ್ತು ನಗರಾಭಿವೃದ್ಧಿ ಸಚಿವ ಮನೋಹರ್ ಲಾಲ್ ಖಟ್ಟರ್ ಅವರನ್ನು ಭೇಟಿ ಮಾಡಲಿದ್ದಾರೆ. ಜೊತೆಗೆ ಮುಂಬೈ ಮತ್ತು ಗಿಫ್ಟ್ ಸಿಟಿಗೆ ಕೂಡ ಭೇಟಿ ನೀಡುವ ಯೋಜನೆ ಇದೆ.
ಈ ಭೇಟಿಯಲ್ಲಿ ಆರ್ಥಿಕ ಹಾಗೂ ಹಣಕಾಸಿನ ಸಂಬಂಧಗಳ ಮೇಲೆ ವಿಶೇಷ ಗಮನ ನೀಡಲಾಗುತ್ತಿದೆ. ಬಿಐಟಿ ಒಪ್ಪಂದದಿಂದ ಭಾರತದಲ್ಲಿ ಇಸ್ರೇಲಿ ಹೂಡಿಕೆದಾರರು ಮತ್ತು ಇಸ್ರೇಲ್‌ನಲ್ಲಿ ಭಾರತೀಯ ಹೂಡಿಕೆದಾರರಿಗೆ ಅಂತರರಾಷ್ಟ್ರೀಯ ಮಾನದಂಡದ ರಕ್ಷಣೆ ದೊರೆಯಲಿದೆ. ಹೂಡಿಕೆದಾರರಿಗೆ ತಾರತಮ್ಯವಿಲ್ಲದ ರಕ್ಷಣೆಯೊಂದಿಗೆ ವಿವಾದ ಇತ್ಯರ್ಥಕ್ಕೆ ಮಧ್ಯಸ್ಥಿಕೆ ವೇದಿಕೆಯೂ ಸಿಗಲಿದೆ.
ಆರ್ಥಿಕ ಸಹಕಾರ ಹೆಚ್ಚಿಸುವ ಮತ್ತು ಸ್ಥಿರ ಹೂಡಿಕೆ ವಾತಾವರಣವನ್ನು ನಿರ್ಮಿಸುವ ಬದ್ಧತೆಯನ್ನು ಈ ಒಪ್ಪಂದ ತರುತ್ತದೆ. ಇದರಿಂದ ಎರಡೂ ದೇಶಗಳ ವ್ಯವಹಾರ ಮತ್ತು ಆರ್ಥಿಕತೆಗೆ ಪ್ರಯೋಜನವಾಗಲಿದೆ.
ಈ ವರ್ಷ ಭಾರತಕ್ಕೆ ಇಸ್ರೇಲಿ ಸಚಿವರ ನಾಲ್ಕನೇ ಭೇಟಿಯಾಗಿದೆ. ಇದಕ್ಕೂ ಮುನ್ನ ಪ್ರವಾಸೋದ್ಯಮ ಸಚಿವ ಹೈಮ್ ಕಾಟ್ಜ್, ಕೈಗಾರಿಕಾ ಸಚಿವ ನಿರ್ ಬರ್ಕತ್ ಮತ್ತು ಕೃಷಿ ಸಚಿವ ಅವಿ ಡಿಕ್ಟರ್ ಭಾರತಕ್ಕೆ ಭೇಟಿ ನೀಡಿದ್ದರು.