ಮಂಗಳೂರು: ದೇಶದ ಏಕೈಕ ಅಂತಾರಾಷ್ಟ್ರೀಯ ಸ್ಟ್ಯಾಂಡ್-ಅಪ್ ಪ್ಯಾಡಲ್ (SUP) ಕಾರ್ಯಕ್ರಮವಾದ ಇಂಡಿಯಾ ಪ್ಯಾಡಲ್ ಫೆಸ್ಟಿವಲ್ (India Paddle Festival) ಎರಡನೇ ಆವೃತ್ತಿ ಮಾರ್ಚ್ 7 ರಿಂದ 9 ರವರೆಗೆ ಮಂಗಳೂರಿನ ಸಸಿಹಿತ್ಲು ಬೀಚ್ ನಲ್ಲಿ ನಡೆಯಲಿದೆ.
ಸರ್ಫಿಂಗ್ ಸ್ವಾಮಿ ಫೌಂಡೇಶನ್ ಆಯೋಜನೆಯ ಈ ಉತ್ಸವಕ್ಕೆ ಕರ್ನಾಟಕ ಪ್ರವಾಸೋದ್ಯಮ ಬೆಂಬಲ ನೀಡಿದ್ದು, ಅಂತರಾಷ್ಟ್ರೀಯ ಕ್ರೀಡಾಪಟುಗಳು, ಸ್ಥಳೀಯ ಸ್ಪರ್ಧಿಗಳು ಮತ್ತು ಜಲಕ್ರೀಡಾ ಉತ್ಸಾಹಿಗಳು ಭಾಗವಹಿಸಲಿದ್ದಾರೆ.
ಪ್ಯಾಡಲ್ ಫೆಸ್ಟಿವಲ್ 2025 ಗೆ ನೋಂದಣಿ ಈಗಲೇ ಆರಂಭವಾಗಿದ್ದು, ವಿವಿಧ ವಿಭಾಗಗಳಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ.
2024ರಲ್ಲಿ ಭಾರತದ ಮೊದಲ ಅಂತಾರಾಷ್ಟ್ರೀಯ ಸ್ಟ್ಯಾಂಡ್-ಅಪ್ ಪ್ಯಾಡಲ್ ಕ್ರೀಡಾಕೂಟ ಯಶಸ್ವಿಯಾಗಿ ನಡೆಯಿದ ನಂತರ, ಈ ಬಾರಿಯ ಉತ್ಸವವೂ ಅದೇ ಉತ್ಸಾಹದಲ್ಲಿ ನಡೆಯುವ ನಿರೀಕ್ಷೆಯಿದೆ. ಇದು ಭಾರತೀಯ ಕ್ರೀಡಾಪಟುಗಳಿಗೆ ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು ಮಹತ್ವದ ವೇದಿಕೆ ಒದಗಿಸುತ್ತದೆ.
APP ವರ್ಲ್ಡ್ ಟೂರ್ನ ಸಿಇಒ ಟ್ರಿಸ್ಟಾನ್ ಬಾಕ್ಸ್ಫೋರ್ಡ್ ಈ ಕಾರ್ಯಕ್ರಮದ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದು, “ಭಾರತದ ಕರಾವಳಿ ಪ್ರದೇಶ SUP ಕ್ರೀಡೆಗೆ ಅಪಾರ ಸಾಮರ್ಥ್ಯ ಹೊಂದಿದೆ. ಪ್ಯಾಡಲ್ ಉತ್ಸವ ಜಾಗತಿಕ ಮಟ್ಟದಲ್ಲಿ ಭಾರತದ ಹೆಗ್ಗಳಿಕೆಯನ್ನು ಹೆಚ್ಚಿಸುತ್ತದೆ” ಎಂದಿದ್ದಾರೆ.
ಸರ್ಫಿಂಗ್ ಸ್ವಾಮಿ ಫೌಂಡೇಶನ್ನ ನಿರ್ದೇಶಕ ಧನಂಜಯ್ ಶೆಟ್ಟಿ ಕೂಡಾ ಉತ್ಸಾಹ ವ್ಯಕ್ತಪಡಿಸಿ, “ಈ ಕಾರ್ಯಕ್ರಮ ಭಾರತದ ಪ್ಯಾಡಲ್ ಮತ್ತು ಸರ್ಫಿಂಗ್ ಕ್ರೀಡಾ ವಿಕಾಸಕ್ಕೆ ದೊಡ್ಡ ಹೆಜ್ಜೆ” ಎಂದು ತಿಳಿಸಿದ್ದಾರೆ.
ಈ ಈವೆಂಟ್ ಬಗ್ಗೆ ಹೆಚ್ಚಿನ ಮಾಹಿತಿಗೆ ಮತ್ತು ನೋಂದಣಿಗೆ India Paddle Festival Official Website ಗೆ ಭೇಟಿ ನೀಡಿ.