ಭಾರತ ಮತ್ತು ಪಾಕಿಸ್ತಾನ್ (India-Pakistan) ಕೊನೆಯ ಬಾರಿ 2012 ರಲ್ಲಿ ದ್ವಿಪಕ್ಷೀಯ ಕ್ರಿಕೆಟ್ ಸರಣಿ ಆಡಿದ್ದರು. ಈ ಸರಣಿಯಲ್ಲಿ 2 T20 ಮತ್ತು 3 ಏಕದಿನ ಪಂದ್ಯಗಳು ನಡೆದಿದ್ದು, T20 ಸರಣಿ ಸಮಬಲವಾಗಿ (1-1), ಪಾಕಿಸ್ತಾನ ಏಕದಿನ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿತ್ತು. ದ್ವಿಪಕ್ಷೀಯ ಕ್ರಿಕೆಟ್‌ಗೇ ಬ್ರೇಕ್ ಆದಾಗಿನಿಂದ ಇಂದಿಗೂ ಈ ಇಬ್ಬರ ನಡುವೆ ಯಾವುದೇ ದ್ವಿಪಕ್ಷೀಯ ಸರಣಿ ನಡೆದಿಲ್ಲ. ಕಳೆದ 12 ವರ್ಷಗಳಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಕೇವಲ ICC ಟೂರ್ನಿಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತಿವೆ.
ಪಾಕಿಸ್ತಾನದ ಮಾಜಿ ವಿಕೆಟ್‌ಕೀಪರ್ ಬ್ಯಾಟರ್ ಕಮ್ರಾನ್ ಅಕ್ಮಲ್, “ದ್ವಿಪಕ್ಷೀಯ ಸರಣಿ ನಡೆಯದ ಹೊರತಾಗಿ, ಯಾವ ICC ಟೂರ್ನಿಯಲ್ಲೂ ಭಾರತ-ಪಾಕಿಸ್ತಾನ್ ತಂಡಗಳು ಆಡಬಾರದು” ಎಂದು ಹೇಳಿದ್ದಾರೆ. ಅವರ ಪ್ರಕಾರ, ಐಸಿಸಿ ಟೂರ್ನಿಗಳಲ್ಲಿ ಮಾತ್ರ ಭಾರತ-ಪಾಕಿಸ್ತಾನ್ ಪಂದ್ಯ ನಡೆಸುವುದು ಸರಿಯಲ್ಲ. ಭಾರತವು ದ್ವಿಪಕ್ಷೀಯ ಕ್ರಿಕೆಟ್‌ಗೆ ತಡೆಯೊಡ್ಡುತ್ತಿದ್ದು, ಇದಕ್ಕೆ ಐಸಿಸಿ ಗಟ್ಟಿಯಾದ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಅಕ್ಮಲ್ ಒತ್ತಿ ಹೇಳಿದರು.
ICC ಚಾಂಪಿಯನ್ಸ್ ಟ್ರೋಫಿ ಹೈಬ್ರಿಡ್ ಮಾದರಿಯ ಚರ್ಚೆಯ ಮಧ್ಯೆ, ಭಾರತವು ಪಾಕಿಸ್ತಾನಕ್ಕೆ ತೆರಳಲು ನಿರಾಕರಿಸಿದೆ. ಈ ಸಂದರ್ಭ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ದ್ವಿಪಕ್ಷೀಯ ಸರಣಿಯ ಪುನರಾರಂಭಕ್ಕಾಗಿ ಐಸಿಸಿಯಿಂದ ಸ್ಪಷ್ಟತೆ ಪಡೆಯಲು ಪ್ರಯತ್ನಿಸಬೇಕು ಎಂದು ಅವರು ಸಲಹೆ ನೀಡಿದರು.
ಟೆಸ್ಟ್ ಸರಣಿಯ ವಿಷಯದಲ್ಲಿ, ಭಾರತ ಮತ್ತು ಪಾಕಿಸ್ತಾನ್ ಕೊನೆಯ ಬಾರಿ 2006 ರಲ್ಲಿ ಮೂರು ಟೆಸ್ಟ್‌ಗಳ ಸರಣಿ ಆಡಿದ್ದು, ಪಾಕಿಸ್ತಾನ 1-0 ಅಂತರದಿಂದ ಜಯ ಸಾಧಿಸಿತ್ತು.
ಅಕ್ಮಲ್ ಅವರ ಅಭಿಪ್ರಾಯದಲ್ಲಿ, ಭಾರತ ಮತ್ತು ಪಾಕಿಸ್ತಾನ ನಡುವೆ ದ್ವಿಪಕ್ಷೀಯ ಕ್ರಿಕೆಟ್ ಪುನರಾರಂಭವಾಗದ ಹೊರತಾಗಿ, ಪಾಕಿಸ್ತಾನ ತಂಡವು ಯಾವುದೇ ಐಸಿಸಿ ಟೂರ್ನಿಯಲ್ಲಿ ಭಾರತದ ವಿರುದ್ಧ ಆಡಬಾರದು.