New Delhi: ಅಮೆರಿಕ ಹೊಸ ಸುಂಕ (ಟ್ಯಾರಿಫ್) ನಿಯಮಗಳನ್ನು ಜಾರಿಗೆ ತಂದ ಹಿನ್ನೆಲೆಯಲ್ಲಿ ಭಾರತವು ಇಂದು (ಆಗಸ್ಟ್ 25)ರಿಂದ ಆ ದೇಶಕ್ಕೆ ಎಲ್ಲಾ ರೀತಿಯ ಅಂಚೆ ಸೇವೆಗಳನ್ನು (Postal Services) ತಾತ್ಕಾಲಿಕವಾಗಿ ನಿಲ್ಲಿಸಿದೆ. ಇದೇ ರೀತಿಯಾಗಿ ಯೂರೋಪಿಯನ್ ದೇಶಗಳೂ ಅಮೆರಿಕಕ್ಕೆ ಪೋಸ್ಟಲ್ ಸೇವೆಗಳನ್ನು ಸ್ಥಗಿತಗೊಳಿಸಿವೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶದಂತೆ, ಭಾರತದ ಸರಕುಗಳ ಮೇಲೆ ಮೊದಲು ಶೇ.25 ಸುಂಕ ಹಾಕಲಾಗಿತ್ತು. ಆಗಸ್ಟ್ 29ರಿಂದ ಮತ್ತೊಂದು ಶೇ.25 ಸುಂಕ ವಿಧಿಸುವುದಾಗಿ ಅಮೆರಿಕ ಘೋಷಿಸಿದೆ. ಇದರಿಂದ ಒಟ್ಟು ಶೇ.50 ಸುಂಕ ಭಾರತದ ಸರಕುಗಳಿಗೆ ವಿಧಿಸಲಾಗುತ್ತದೆ.
ಭಾರತದ ಅಂಚೆ ಇಲಾಖೆ ಹೇಳಿಕೆಯಂತೆ, ಅಮೆರಿಕಕ್ಕೆ ಕಳುಹಿಸುವ ಯಾವುದೇ ಅಂತಾರಾಷ್ಟ್ರೀಯ ಅಂಚೆ ವಸ್ತುಗಳಿಗೆ ಆ ದೇಶದ ಟ್ಯಾರಿಫ್ ಅನ್ವಯವಾಗುತ್ತದೆ. ಆದರೆ 100 ಡಾಲರ್ ಒಳಗಿನ ಗಿಫ್ಟ್ ಐಟಂಗಳು ಮಾತ್ರ ವಿನಾಯಿತಿಗೆ ಒಳಪಟ್ಟಿರುತ್ತವೆ.
ಅಮೆರಿಕದ ಹೊಸ ನಿಯಮಗಳ ಕಾರಣದಿಂದಾಗಿ ಸರಕು ಸಾಗಾಣಿಕೆ ಕಂಪನಿಗಳು ಆಗಸ್ಟ್ 25ರ ನಂತರ ಅಮೆರಿಕಕ್ಕೆ ಸರಕು ಕಳುಹಿಸಲು ಸಾಧ್ಯವಿಲ್ಲವೆಂದು ಭಾರತೀಯ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಇದರ ಹಿನ್ನೆಲೆಯಲ್ಲಿ ಅಂಚೆ ಇಲಾಖೆ ಬುಕ್ಕಿಂಗ್ ನಿಲ್ಲಿಸಿದೆ.
ಯೂರೋಪಿನ ಜರ್ಮನಿ, ಡೆನ್ಮಾರ್ಕ್, ಸ್ವೀಡನ್, ಇಟಲಿ ದೇಶಗಳು ನಿನ್ನೆ (ಆಗಸ್ಟ್ 24)ರಿಂದಲೇ ಪೋಸ್ಟಲ್ ಸೇವೆ ನಿಲ್ಲಿಸಿವೆ. ಫ್ರಾನ್ಸ್ ಮತ್ತು ಆಸ್ಟ್ರಿಯಾ ಇಂದು ನಿಲ್ಲಿಸಿವೆ. ಬ್ರಿಟನ್ ನ ರಾಯಲ್ ಮೇಲ್ ಮಂಗಳವಾರ ಸ್ಥಗಿತಗೊಳಿಸುತ್ತಿದೆ.
ಅಂಚೆಗಳಿಗೆ ಸುಂಕವನ್ನು ಪಾವತಿಸಬೇಕಾದವರು ಯಾರು ಎನ್ನುವುದರ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಈ ಕಾರಣವೂ ಪೋಸ್ಟಲ್ ಸೇವೆ ನಿಲ್ಲಿಸಲು ಕಾರಣವಾಗಿದೆ.