
London: ಭಾರತದ ಪ್ರಧಾನಿ ನರೇಂದ್ರ ಮೋದಿ (Indian Prime Minister Narendra Modi) ಮತ್ತು ಯುಕೆಯ (UK) ಪ್ರಧಾನಮಂತ್ರಿ ಕೀರ್ ಸ್ಟಾರ್ಮರ್ (UK Prime Minister Keir Starmer) ನಡುವೆ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಈ ಒಪ್ಪಂದದ ಸಂಭ್ರಮವನ್ನು ಇಬ್ಬರೂ ನಾಯಕರೂ ಮಸಾಲೆ ಚಹಾ ಕುಡಿಯುತ್ತಾ ಹಂಚಿಕೊಂಡರು.
ಪ್ರಧಾನಿ ಮೋದಿ ತಮ್ಮ ಯುಕೆ ಪ್ರವಾಸದ ವೇಳೆ ನಡೆದ ಈ ಒಪ್ಪಂದವನ್ನು “ಹಂಚಿಕೆಯ ಸಮೃದ್ಧಿಗೆ ನೀಲನಕ್ಷೆ” ಎಂದು ಬಣ್ಣಿಸಿದರು. ಅವರು “ಚಾಯ್ ಪೆ ಚರ್ಚಾ” ಮೂಲಕ ಭಾರತ-ಬ್ರಿಟನ್ ಸಂಬಂಧವನ್ನು ಬಲಪಡಿಸುವ ಕುರಿತಾದ ಮಾತುಕತೆ ನಡೆಸಿದುದಾಗಿ ತಮ್ಮ ಎಕ್ಸ್ ಖಾತೆಯಲ್ಲಿ ತಿಳಿಸಿದ್ದಾರೆ.
ಪ್ರಧಾನಿ ಕೀರ್ ಸ್ಟಾರ್ಮರ್ ಅವರೊಂದಿಗೆ ಭಾರತ ಶೈಲಿಯ ಮಸಾಲೆ ಚಹಾ ಸೇವಿಸಿದ ಮೋದಿ, ಈ ಸಭೆಯಲ್ಲಿ ಹಲವಾರು ವಿಷಯಗಳ ಬಗ್ಗೆ ಒಪ್ಪಂದಕ್ಕೆ ಬಂದಿದ್ದು, ಅದು ಭವಿಷ್ಯದಲ್ಲಿ ಉಭಯ ದೇಶಗಳಿಗೆ ಉಪಯುಕ್ತವಾಗಲಿದೆ ಎಂದು ಹೇಳಿದರು.
ಅಲ್ಲದೇ, ಈ ಭೇಟಿಯ ವೇಳೆ ಇಬ್ಬರೂ ನಾಯಕರು “ಇಂಡಿಯಾ-ಯುಕೆ ವಿಷನ್ 2035” ಸಂಬಂಧಿಸಿದಂತೆ ಜಂಟಿ ಪತ್ರಿಕಾಗೋಷ್ಠಿಯನ್ನೂ ನಡೆಸಿದರು. ಪತ್ರಿಕಾಗೋಷ್ಠಿಯಲ್ಲಿ ಪ್ರಧಾನಿ ಮೋದಿ ತಮ್ಮ ಹಾಸ್ಯವಾಡಿದ ಶೈಲಿಯಲ್ಲಿ, “ನಾವು ಮಾತುಕತೆಯಲ್ಲಿ ಇಂಗ್ಲಿಷ್ ಪದಗಳನ್ನು ಬಳಸಿದರೂ ಪರವಾಗಿಲ್ಲ” ಎಂದರೆ, ಸ್ಟಾರ್ಮರ್ ಅವರು “ನಾವು ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥಮಾಡಿಕೊಂಡಿದ್ದೇವೆ” ಎಂದು ನಗುತ್ತಾ ಪ್ರತಿಕ್ರಿಯಿಸಿದರು.
ಮೋದಿ ಅವರು ಭಾರತ-ಯುಕೆ ಸಂಬಂಧವನ್ನು ಕ್ರಿಕೆಟ್ ಆಟಕ್ಕೆ ಹೋಲಿಸಿದರು. “ಬಾಲ್ ಸ್ವಿಂಗ್ ಆಗಬಹುದು ಅಥವಾ ಮಿಸ್ ಆಗಬಹುದು, ಆದರೆ ನಾವು ನೇರ ಬ್ಯಾಟಿಂಗ್ ಮಾಡುತ್ತೇವೆ. ಎರಡೂ ದೇಶಗಳು ಜತೆಗೂಡಿ ಉತ್ತಮ ಸ್ಕೋರ್ ಮಾಡಲು ಸಿದ್ಧವಿವೆ” ಎಂದರು.
ಒಪ್ಪಂದದ ಮುಖ್ಯ ಲಾಭಗಳು
- ಭಾರತೀಯ ವಸ್ತುಗಳಿಗೆ ಯುಕೆ ಮಾರುಕಟ್ಟೆಯಲ್ಲಿ ಉತ್ತಮ ಪ್ರವೇಶ (ಜವಳಿ, ಪಾದರಕ್ಷೆ, ಆಭರಣಗಳು).
- ಕೃಷಿ ಉತ್ಪನ್ನಗಳು ಮತ್ತು ಸಂಸ್ಕರಿಸಿದ ಆಹಾರಗಳಿಗಾಗಿ ಹೊಸ ಅವಕಾಶಗಳು.
- ಯುವಕರು, ರೈತರು, ಮೀನುಗಾರರು ಮತ್ತು ಎಂಎಸ್ಎಂಇಗಳಿಗೆ ಲಾಭ.
- ಯುಕೆಯಲ್ಲಿ ತಯಾರಾದ ಔಷಧಗಳು ಭಾರತೀಯರಿಗೆ ಕಡಿಮೆ ದರದಲ್ಲಿ ಲಭ್ಯ.
- ತಂತ್ರಜ್ಞಾನ, ಹಣಕಾಸು ಸೇವೆಗಳ ಕ್ಷೇತ್ರದಲ್ಲಿ ಸಹಕಾರ ಹೆಚ್ಚಳ.
- ಹೊಸ ಉದ್ಯೋಗಾವಕಾಶಗಳು ಮತ್ತು ಹೂಡಿಕೆಗೂ ಅವಕಾಶ.
“ಈ ಒಪ್ಪಂದವು ಕೇವಲ ಆರ್ಥಿಕವಾಗಿ, ಜಾಗತಿಕ ಸ್ಥಿರತೆ ಮತ್ತು ಹಂಚಿಕೆಯ ಸಮೃದ್ಧಿಗೆ ಸಹ ಬಲ ನೀಡುತ್ತದೆ. ಭಾರತ-ಬ್ರಿಟನ್ ನಡುವಿನ ನಂಟುಗಳು ಇನ್ನು ಮುಂದೆ ಮತ್ತಷ್ಟು ಗಾಢವಾಗಲಿವೆ” ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.