ರಷ್ಯಾದಿಂದ ಇಂಧನ ಖರೀದಿ ವಿಚಾರದಲ್ಲಿ ಒತ್ತಡ ಎದುರಿಸುತ್ತಿದ್ದರೂ, ಭಾರತ ಒಂದು ಬಿಲಿಯನ್ ಡಾಲರ್ ಮೌಲ್ಯದ ಫೈಟರ್ ಜೆಟ್ ಎಂಜಿನ್ ಖರೀದಿ ಒಪ್ಪಂದಕ್ಕೆ ಅಮೆರಿಕದ ಜಿ.ಇ (GE) ಕಂಪನಿಯೊಂದಿಗೆ ಸಹಿ ಹಾಕಲು ಸಿದ್ಧವಾಗಿದೆ. ಈ ಒಪ್ಪಂದವನ್ನು ಸೆಪ್ಟೆಂಬರ್ ವೇಳೆಗೆ ಅಂತಿಮಗೊಳಿಸುವ ಸಾಧ್ಯತೆ ಇದೆ.
LCA Mark 1A ಯೋಜನೆ: ಭಾರತ ಈಗಾಗಲೇ 97 LCA Mark 1A ಫೈಟರ್ ವಿಮಾನಗಳನ್ನು ಖರೀದಿಸಲು ₹62,000 ಕೋಟಿ ಮೌಲ್ಯದ ಯೋಜನೆಗೆ ಅನುಮೋದನೆ ನೀಡಿದೆ. ಇದರ ಅಂಗವಾಗಿ 113 GE-404 ಎಂಜಿನ್ ಗಳನ್ನು ಜಿ.ಇ ಕಂಪನಿಯಿಂದ ಖರೀದಿಸಲು ಸಿದ್ಧವಾಗಿದೆ.
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಭಾರತೀಯ ವಾಯುಪಡೆಯ ಬೇಡಿಕೆಯನ್ನು ಪೂರೈಸಲು 83 LCA Mark 1A ಫೈಟರ್ ಜೆಟ್‌ಗಳಿಗಾಗಿ ಈಗಾಗಲೇ 99 ಎಂಜಿನ್ ಗಳನ್ನು ಆರ್ಡರ್ ಮಾಡಿದೆ. ಇನ್ನು 113 ಹೆಚ್ಚುವರಿ ಎಂಜಿನ್ಗಳನ್ನು ಖರೀದಿಸಲು ಮಾತುಕತೆ ಅಂತಿಮ ಹಂತದಲ್ಲಿದೆ.
HAL ಒಟ್ಟಾರೆ 212 GE-404 ಎಂಜಿನ್ ಗಳ ಅಗತ್ಯವನ್ನು ಈ ಒಪ್ಪಂದದ ಮೂಲಕ ಪೂರೈಸಲಿದೆ. 2029–30 ರೊಳಗೆ 83 ವಿಮಾನಗಳು ಹಾಗೂ 2033–34 ರೊಳಗೆ ಉಳಿದ 97 ವಿಮಾನಗಳನ್ನು ಪೂರೈಸುವ ಗುರಿ ಹೊಂದಿದೆ. GE ಕಂಪನಿ ತಿಂಗಳಿಗೆ ಎರಡು ಎಂಜಿನ್ ಗಳ ಪೂರೈಕೆಯನ್ನು ಪ್ರಾರಂಭಿಸುವ ನಿರೀಕ್ಷೆಯಿದೆ.
ಮುಂದಿನ ಹಂತ – GE-414 ಎಂಜಿನ್: HAL ಭವಿಷ್ಯದ LCA Mark 2 ಮತ್ತು AMCA (Advanced Medium Combat Aircraft) ವಿಮಾನಗಳಿಗಾಗಿ GE-414 ಎಂಜಿನ್ ಗಳ ಖರೀದಿಗೆ ಕೂಡ ಮಾತುಕತೆ ನಡೆಸುತ್ತಿದೆ. ಶೇಕಡಾ 80ರಷ್ಟು ತಂತ್ರಜ್ಞಾನ ವರ್ಗಾವಣೆಯೊಂದಿಗೆ 200ಕ್ಕೂ ಹೆಚ್ಚು ಎಂಜಿನ್ ಗಳ ಪೂರೈಕೆಗೆ ಸಾದ್ಯತೆ ಇದೆ.
MiG-21 ಬದಲಾವಣೆ: ಈ ಯೋಜನೆಯಿಂದ ಭಾರತೀಯ ವಾಯುಪಡೆಯ ಹಳೆಯ MiG-21 ಯುದ್ಧವಿಮಾನಗಳನ್ನು ಹಂತಹಂತವಾಗಿ ತೆಗೆಯುವ ಪ್ರಕ್ರಿಯೆಗೆ ವೇಗ ಸಿಗಲಿದೆ.
ಸ್ವದೇಶಿ ಎಂಜಿನ್ ಪ್ರಯತ್ನಗಳು: ಭಾರತ ತನ್ನದೇ ಎಂಜಿನ್ ತಯಾರಿಕೆ ಯೋಜನೆಗೂ ತೊಡಗಿಕೊಂಡಿದೆ. ಇದಕ್ಕಾಗಿ ಫ್ರೆಂಚ್ ಕಂಪನಿ ಸಫ್ರಾನ್ ಜೊತೆಗೂಡಿ ತಂತ್ರಜ್ಞಾನ ಅಭಿವೃದ್ಧಿ ಕಾರ್ಯ ನಡೆಸುತ್ತಿದೆ. ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವ ಗುರಿ ಈ ಮೂಲಕ ಬಲಪಡುತ್ತಿದೆ.