ಭಾರತವು ಮೊದಲ ಬಾರಿಗೆ ತನ್ನ ಸ್ವದೇಶಿ MRI (Magnetic Resonance Imaging) ಯಂತ್ರವನ್ನು (MRI machine) ಅಭಿವೃದ್ಧಿಪಡಿಸಿದ್ದು, ದೆಹಲಿಯ ಏಮ್ಸ್ (AIIMS) ಆಸ್ಪತ್ರೆಯಲ್ಲಿ ಇದನ್ನು ಸ್ಥಾಪಿಸಲಾಗುತ್ತಿದೆ. ಅಕ್ಟೋಬರ್ 2025 ರಿಂದ ಇದರ ಪ್ರಯೋಗಗಳು ಪ್ರಾರಂಭವಾಗಲಿದ್ದು, ಇದು ಚಿಕಿತ್ಸಾ ವೆಚ್ಚವನ್ನು ಕಡಿಮೆ ಮಾಡುವ ಮತ್ತು ವೈದ್ಯಕೀಯ ಸಾಧನಗಳ ಆಮದು ಅವಲಂಬನೆಯನ್ನು ಶೇ. 80-85ರಷ್ಟು ತಗ್ಗಿಸುವ ನಿರೀಕ್ಷೆಯಿದೆ.
ಭಾರತ ವೈದ್ಯಕೀಯ ತಂತ್ರಜ್ಞಾನದಲ್ಲಿ ಸ್ವಾವಲಂಬಿಯಾಗಲು ಈ ಬೆಳವಣಿಗೆ ಮಹತ್ವದ್ದಾಗಿದೆ. 1.5 ಟೆಸ್ಲಾ MRI ಸ್ಕ್ಯಾನರ್ ಅಭಿವೃದ್ಧಿಗಾಗಿ SAMEER (ಸೊಸೈಟಿ ಫಾರ್ ಅಪ್ಲೈಡ್ ಮೈಕ್ರೋವೇವ್ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ಮತ್ತು ಸಂಶೋಧನಾ ಸಂಸ್ಥೆ) ಹಾಗೂ AIIMS ನಡುವೆ ಒಪ್ಪಂದ (MoU) ಸಹಿ ಹಾಕಲಾಗಿದೆ.
ದೆಹಲಿಯ ಏಮ್ಸ್ ನಿರ್ದೇಶಕ ಡಾ. ಎಂ. ಶ್ರೀನಿವಾಸ್ ಅವರ ಮಾತಿನಲ್ಲಿ: “ಭಾರತದಲ್ಲಿ ಹೆಚ್ಚಿನ ಗುಣಮಟ್ಟದ ವೈದ್ಯಕೀಯ ಉಪಕರಣಗಳನ್ನು ಶೇ. 80-90ರಷ್ಟು ಆಮದು ಮಾಡಿಕೊಳ್ಳಲಾಗುತ್ತದೆ. ಆದರೆ ಈಗ ನಾವು ಈ ಸಾಧನಗಳನ್ನು ಭಾರತದಲ್ಲಿಯೇ ಉತ್ಪಾದಿಸಲು ಯತ್ನಿಸುತ್ತಿದ್ದೇವೆ. ಇದು ಸ್ವಾವಲಂಬಿ ಭಾರತದತ್ತ ದೊಡ್ಡ ಹೆಜ್ಜೆಯಾಗಿದೆ.”
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) SAMEER ಮೂಲಕ ಎರಡು ಪ್ರಮುಖ ವೈದ್ಯಕೀಯ ಉಪಕರಣಗಳನ್ನು ಅಭಿವೃದ್ಧಿಪಡಿಸಿದೆ.
- 1.5 ಟೆಸ್ಲಾ MRI ಸ್ಕ್ಯಾನರ್ – ಮೃದು ಅಂಗಾಂಶಗಳ ಪರೀಕ್ಷೆಗೆ ಉಪಯುಕ್ತ.
- 6 MEV ಲೀನಿಯರ್ ಆಕ್ಸಿಲರೇಟರ್ (LINAC) – ಕ್ಯಾನ್ಸರ್ ಚಿಕಿತ್ಸೆಗಾಗಿ ಹೆಚ್ಚಿನ ಶಕ್ತಿಯ ಎಕ್ಸ್-ಕಿರಣಗಳು ಅಥವಾ ಎಲೆಕ್ಟ್ರಾನ್ ಗಳನ್ನು ಉತ್ಪಾದಿಸುವ ಉಪಕರಣ.
ಈ ಯೋಜನೆಗಳು C-DAC (ತಿರುವನಂತಪುರ, ಕೋಲ್ಕತ್ತಾ), ಇಂಟರ್ ಯೂನಿವರ್ಸಿಟಿ ಆಕ್ಸಿಲರೇಟರ್ ಸೆಂಟರ್ (IUAC) ಮತ್ತು ದಯಾನಂದ ಸಾಗರ್ ಇನ್ಸ್ಟಿಟ್ಯೂಟ್ (DSI) ಸಹಯೋಗದೊಂದಿಗೆ ಕಾರ್ಯನಿರ್ವಹಿಸುತ್ತಿವೆ. MeitY ನಿಂದ ಆರ್ಥಿಕ ಬೆಂಬಲ ಪಡೆದಿರುವ ಈ ಯೋಜನೆಗಳು ಭಾರತವನ್ನು ಆಮದು ಅವಲಂಬನೆಯನ್ನು ಕಡಿಮೆ ಮಾಡುವತ್ತ ಮುನ್ನಡೆಸುತ್ತಿವೆ.