
Mangalore: ಭಾರತದ ಅತಿದೊಡ್ಡ ಭೂಗತ LPG (ದ್ರವೀಕೃತ ಪೆಟ್ರೋಲಿಯಂ ಅನಿಲ) ಸಂಗ್ರಹಾಗಾರ ಮಂಗಳೂರಿನಲ್ಲಿ (Mangalore) ನಿರ್ಮಾಣವಾಗಿದೆ. ಈ ಯೋಜನೆಯು ದೇಶದ ಇಂಧನ ಮೂಲಸೌಕರ್ಯ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆಯಾಗಿದೆ.
ಈ ಹಿಂದೆ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿರುವ 60,000 ಟನ್ ಸಾಮರ್ಥ್ಯದ ಸಂಗ್ರಹಾಗಾರವೇ ಅತಿದೊಡ್ಡದ್ದಾಗಿತ್ತು. ಆದರೆ ಇದೀಗ ಮಂಗಳೂರಿನಲ್ಲಿ ನಿರ್ಮಿತವಾದ ಈ ಹೊಸ ಸಂಗ್ರಹಾಗಾರ 80,000 ಟನ್ ಸಾಮರ್ಥ್ಯ ಹೊಂದಿದ್ದು, ಇದನ್ನು ಮೇಘಾ ಎಂಜಿನಿಯರಿಂಗ್ ಅಂಡ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (MEIL) ಕಂಪನಿಯು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ಗಾಗಿ ನಿರ್ಮಿಸಿದೆ.
ಈ ಸಂಗ್ರಹಾಗಾರ ದೇಶದ ಪೆಟ್ರೋಲಿಯಂ ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು ಭದ್ರತೆಗೆ ಸಹಕಾರಿಯಾಗುತ್ತದೆ. ಭಾರತದ ಇತರ LPG ಭೂಗತ ಸಂಗ್ರಹಾಗಾರಗಳ ಪೈಕಿ ಮಂಗಳೂರಿನದು ಎರಡನೇದು ಮಾತ್ರ.
ಸಂಗ್ರಹಾಗಾರದ ವೈಶಿಷ್ಟ್ಯಗಳು
- ಇದು 6 ಲಕ್ಷ ಬ್ಯಾರೆಲ್ ಅಥವಾ 60 ಮಿಲಿಯನ್ ಲೀಟರ್ LPG ಸಂಗ್ರಹಿಸಬಲ್ಲದು.
- ಇಲ್ಲಿ ಪ್ರತ್ಯೇಕವಾಗಿ 40,000 ಟನ್ ಪ್ರೊಪೇನ್ ಮತ್ತು 60,000 ಟನ್ ಬ್ಯುಟೇನ್ ಸಂಗ್ರಹಿಸಬಲ್ಲ ಎರಡು ಭೂಗತ ಕೊಠಡಿಗಳಿವೆ.
- ಈ ಯೋಜನೆಗೆ 854 ಕೋಟಿ ರೂ ವೆಚ್ಚವಾಗಿದೆ.
- ಇತ್ತೀಚೆಗೆ ನಡೆಯದ ‘ಕ್ಯಾವರ್ನ್ ಆ್ಯಕ್ಸಪ್ಟೆನ್ಸ್ ಟೆಸ್ಟ್ (CAT)’ನ್ನು ಯಶಸ್ವಿಯಾಗಿ ಪೂರೈಸಲಾಗಿದೆ.
- ಸಂಗ್ರಹಾಗಾರದಲ್ಲಿ 1,083 ಮೀಟರ್ ಉದ್ದದ ಸುರಂಗವಿದೆ. ಮುಖ್ಯ ಘಟಕಗಳು ಎಸ್1 ಮತ್ತು ಎಸ್2 ಕ್ರಮವಾಗಿ 220 ಮತ್ತು 225 ಮೀಟರ್ ಆಳದಲ್ಲಿವೆ.
ಇಂಧನ ಪೂರೈಕೆಯಲ್ಲಿ ನಿರಂತರತೆ ಕಾಯ್ದುಕೊಳ್ಳಲು ಮತ್ತು ಪೂರೈಕೆ ಅಡಚಣೆಗಳನ್ನು ನಿವಾರಣೆಗೆ ಇದು ಸಹಾಯಕವಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.