Bengaluru: ಮುಖ್ಯಮಂತ್ರಿ ಸಿದ್ದರಾಮಯ್ಯ (Chief Minister Siddaramaiah) ಅವರು ಸೋಮವಾರ ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ಅಪೋಲೋ ಆಸ್ಪತ್ರೆಗೆ ನಿಯಮಿತ ವೈದ್ಯಕೀಯ ತಪಾಸಣೆಗೆ ಹಾಜರಾಗಿದ್ದರು. ಈ ಕುರಿತಾದ ಸುದ್ದಿಗೆ ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಅವಹೇಳನಕಾರಿ ಮತ್ತು ಕೆಟ್ಟ ಕಾಮೆಂಟ್‌ಗಳನ್ನು ಹಾಕಿದ್ದಾರೆ ಎಂಬ ಆರೋಪದ ಮೇಲೆ ಬೆಂಗಳೂರು ಪಶ್ಚಿಮ ಜಿಲ್ಲಾ ಕಾಂಗ್ರೆಸ್ ಸಮಿತಿ ಪೊಲೀಸ್ ಠಾಣೆಗೆ ದೂರು ನೀಡಿದೆ.
ಈ ದುರುದ್ದೇಶಪೂರ್ಣ ಕಾಮೆಂಟ್‌ಗಳಲ್ಲಿ ಸಿದ್ದರಾಮಯ್ಯ ಅವರ ಸಾವಿನ ಕುರಿತು ಅಪಸ್ವರ ಬಳಕೆ ಮಾಡಲಾಗಿದೆ ಮತ್ತು ಅಶ್ಲೀಲ ಭಾಷೆಯಲ್ಲಿ ನಿಂದನೆ ಮಾಡಲಾಗಿದೆ ಎಂದು ಪೀಣ್ಯ ಠಾಣೆಗೆ ನೀಡಿರುವ ದೂರಿನಲ್ಲಿ ಹೇಳಲಾಗಿದೆ. ಕುಶಾಲ್ ಹರುವೇಗೌಡ ಮತ್ತು ಸಂಜಯ್ ಎಂಬ ಕಾಂಗ್ರೆಸ್ ನಾಯಕರು ಈ ದೂರನ್ನು ಸಲ್ಲಿಸಿದ್ದಾರೆ.
ಜುಲೈ 7ರಂದು ಖಾಸಗಿ ವಾಹಿನಿಯೊಂದು ಸಿಎಂ ಆಸ್ಪತ್ರೆಗೆ ತೆರಳಿದ ಬಗ್ಗೆ ವರದಿ ಪ್ರಸಾರಮಾಡಿದ ಬಳಿಕ, ಕೆಲವು ವಿಕೃತ ಮನಸ್ಸಿನವರು ಫೇಸ್ಬುಕ್‌ನಲ್ಲಿ ಸಿದ್ದರಾಮಯ್ಯ ಅವರ ಸಾವಿಗೆ ಪ್ರಾರ್ಥಿಸುವಂಥ ಹೇಳಿಕೆಗಳನ್ನು ಪ್ರಕಟಿಸಿದ್ದಾರೆ. ಈ ಮೂಲಕ ಸಿಎಂ ಅಭಿಮಾನಿಗಳು, ಕಾರ್ಯಕರ್ತರು ಹಾಗೂ ಸಾರ್ವಜನಿಕರಲ್ಲಿ ನೋವು ಮೂಡಿಸಲಾಗಿದೆ. ಈ ರೀತಿಯ ಕಾಮೆಂಟ್‌ಗಳು ರಾಜ್ಯದ ಶಾಂತಿಯುತ ಪರಿಸ್ಥಿತಿಗೆ ಹಾನಿ ಉಂಟುಮಾಡಬಲ್ಲದು ಎಂಬ ಎಚ್ಚರಿಕೆಯನ್ನು ಕಾಂಗ್ರೆಸ್ ನೀಡಿದೆ.
ಈ ಹಿನ್ನೆಲೆ, ಆರೋಪಿಗಳನ್ನು ಶೀಘ್ರ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್ ಮನವಿ ಮಾಡಿದೆ. ಅವರು ನೀಡಿರುವ ದೂರಿನೊಂದಿಗೆ ಆರೋಪಿಗಳ ಕಾಮೆಂಟ್‌ಗಳ ಸ್ಕ್ರೀನ್ಶಾಟ್‌ಗಳ ನಕಲು ಪ್ರತಿಗಳನ್ನೂ ಲಗತ್ತಿಸಲಾಗಿದೆ.
ಇನ್ನೊಂದೆಡೆ, ಸಿಎಂ ಸಿದ್ದರಾಮಯ್ಯ ಅವರು ಇಂದು ಯಾವುದೇ ಸಭೆ ಅಥವಾ ಕಾರ್ಯಕ್ರಮಗಳಲ್ಲಿ ಭಾಗವಹಿಸದೆ ವಿಶ್ರಾಂತಿ ಪಡೆಯಲಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ. ನಾಳೆ ಅವರು ದೆಹಲಿಗೆ ತೆರಳುವ ನಿರೀಕ್ಷೆ ಇದೆ.