IPL 2025 ಪ್ರಾರಂಭಕ್ಕೆ 48 ಗಂಟೆಗಳ ಮುನ್ನ, BCCI ಮುಂಬೈನಲ್ಲಿರುವ ಎಲ್ಲಾ ತಂಡಗಳ ನಾಯಕರ ಜೊತೆ ಸಭೆ ನಡೆಸಿ ಹಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದೆ. ಹಳೆಯ ಕೆಲವು ನಿಯಮಗಳನ್ನು ಬದಲಾಯಿಸಿ, ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ.
ನಾಯಕರಿಗೆ ಸಂಬಂಧಿಸಿದ ಪ್ರಮುಖ ಬದಲಾವಣೆ ಒಂದಾಗಿದೆ. ಇನ್ನು ಮುಂದೆ ನಿಧಾನಗತಿಯ ಓವರ್ ರೇಟ್ (Slow Over Rate) ತಪ್ಪಿಗೆ ನಾಯಕರಿಗೆ ಪಂದ್ಯ ನಿಷೇಧ ವಿಧಿಸುವುದಿಲ್ಲ. ಅದರ ಬದಲು ದಂಡ ವಿಧಿಸಲಾಗುತ್ತದೆ. ಈ ಹೊಸ ನಿಯಮವನ್ನು 10 ಫ್ರಾಂಚೈಸಿಗಳ ನಾಯಕರು ಮತ್ತು ವ್ಯವಸ್ಥಾಪಕರಿಗೆ ಬಿಸಿಸಿಐ ಪ್ರಧಾನ ಕಚೇರಿಯಲ್ಲಿ ತಿಳಿಸಲಾಗಿದೆ.
ನಿಧಾನ ಓವರ್ ದರ ತಪ್ಪಿಗೆ ಐಸಿಸಿ ಮಾದರಿಯಂತೆ ಡಿಮೆರಿಟ್ ಅಂಕಗಳನ್ನು ನೀಡಲಾಗುತ್ತದೆ. ಈ ಅಂಕಗಳು ಮೂರು ವರ್ಷಗಳವರೆಗೆ ಮಾನ್ಯವಾಗಿರುತ್ತವೆ.
- ಲೆವೆಲ್ 1 ಅಪರಾಧಕ್ಕೆ: ಪಂದ್ಯ ಶುಲ್ಕದ 25% – 75% ದಂಡ
- ಲೆವೆಲ್ 2 ಅಪರಾಧಕ್ಕೆ: ನಾಲ್ಕು ಡಿಮೆರಿಟ್ ಅಂಕ
ಪ್ರತಿ 4 ಡಿಮೆರಿಟ್ ಅಂಕ ಸಂಗ್ರಹವಾದರೆ, ಪಂದ್ಯ ರೆಫರಿ 100% ದಂಡ ಅಥವಾ ಹೆಚ್ಚುವರಿ ಶಿಸ್ತಿನ ಕ್ರಮಗಳನ್ನು ತೆಗೆದುಕೊಳ್ಳಬಹುದು. ಕಳೆದ ಋತುವಿನಲ್ಲಿ ರಿಷಭ್ ಪಂತ್ ಮತ್ತು ಹಾರ್ದಿಕ್ ಪಾಂಡ್ಯರಂತಹ ನಾಯಕರು ನಿಧಾನ ಓವರ್ ದರದ ಕಾರಣದಿಂದ ಪಂದ್ಯಗಳನ್ನು ಕಳೆದುಕೊಂಡಿದ್ದರು. ಆದರೆ, ಹೊಸ ನಿಯಮದಿಂದ ಮುಂಬರುವ ಪಂದ್ಯಗಳ ಮೇಲೆ ಇದರ ಪರಿಣಾಮ ಕಡಿಮೆಯಾಗಲಿದೆ.