ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಬಿಸಿಸಿಐ (BCCI) 2025ರ IPL ಟೂರ್ನಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಪಾಕಿಸ್ತಾನವು ಭಾರತದ ಕೆಲವು ನಗರಗಳ ಮೇಲೆ ಡ್ರೋನ್ ದಾಳಿಗಳನ್ನು ನಡೆಸಿದ ಹಿನ್ನೆಲೆಯಲ್ಲಿ, ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಭಾರತವು ತೀವ್ರ ಪ್ರತಿಕ್ರಿಯೆ ನೀಡಿ, ಪಾಕಿಸ್ತಾನದ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ನಾಶಪಡಿಸಿದೆ.
ಈ ಘಟನೆಗಳ ಪರಿಣಾಮವಾಗಿ ಧರ್ಮಶಾಲಾದಲ್ಲಿ ನಡೆಯುತ್ತಿದ್ದ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯ ಅರ್ಧಕ್ಕೆ ನಿಲ್ಲಿಸಲಾಯಿತು. ಈ ಬೆಳವಣಿಗೆಯ ನಂತರ, ಐಪಿಎಲ್‌ನ ಉಳಿದ ಪಂದ್ಯಗಳನ್ನು ಶೀಘ್ರದಲ್ಲೇ ಮರುನಿಗದಿಪಡಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಪಹಲ್ಗಾಮ್ ನಲ್ಲಿ ಏಪ್ರಿಲ್ 22ರಂದು ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತವು “ಆಪರೇಷನ್ ಸಿಂಧೂರ್” ಎಂಬ ಹೆಸರಿನಲ್ಲಿ ಪಾಕಿಸ್ತಾನದ ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ನಡೆಸಿದೆ. ಇದರಿಂದ ಪಾಕಿಸ್ತಾನ ಸಿಟ್ಟಿನಿಂದ ಪ್ರತಿಕ್ರಿಯೆ ನೀಡಿದ್ದು, ಅನೇಕ ಕೃತ್ಯಗಳನ್ನು ಎಸಗುತ್ತಿದೆ.
ಈ ಪರಿಸ್ಥಿತಿಯಲ್ಲಿ ಬಿಸಿಸಿಐ ಯಾವುದೇ ಅಪಾಯವನ್ನು ತೆಗೆದುಕೊಳ್ಳದೇ, ಎಲ್ಲಾ ಫ್ರಾಂಚೈಸಿಗಳು ಮತ್ತು ಪಾಲುದಾರರೊಂದಿಗೆ ಚರ್ಚಿಸಿ ಐಪಿಎಲ್ ಪಂದ್ಯಾವಳಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ವಿದೇಶಿ ಆಟಗಾರರು ತಮ್ಮ ದೇಶಗಳಿಗೆ ಹಿಂದಿರುಗುವ ನಿರ್ಧಾರ ತೆಗೆದುಕೊಂಡಿದ್ದಾರೆ. ಅವರ ಕುಟುಂಬಗಳು ಕೂಡ ಭಾರತದಲ್ಲಿರುವುದರಿಂದ, ಬಿಸಿಸಿಐ ಈಗ ಅವರನ್ನು ಸುರಕ್ಷಿತವಾಗಿ ಕಳಿಸಲು ಮುಂದಾಗಿದೆ.
ಈ ಐಪಿಎಲ್ ಆವೃತ್ತಿಯಲ್ಲಿ ಈಗಾಗಲೇ 57 ಪಂದ್ಯಗಳು ಮುಕ್ತಾಯಗೊಂಡಿವೆ. 58ನೇ ಪಂದ್ಯವನ್ನು ಅರ್ಧಕ್ಕೆ ನಿಲ್ಲಿಸಲಾಗಿದ್ದು, ಇಡೀ ಸೀಸನ್‌ನಲ್ಲಿ ಒಟ್ಟು 74 ಪಂದ್ಯಗಳು ಇರಬೇಕಿತ್ತು. ಈ ಪಂದ್ಯದ ಅಂತಿಮ ದಿನಾಂಕ ಮೇ 25 ರಂದು ಕೋಲ್ಕತ್ತಾದಲ್ಲಿ ನಿಗದಿಯಾಗಿತ್ತು.
ಈಗ ಉಳಿದ 16 ಪಂದ್ಯಗಳಿಗಾಗಿ ಬಿಸಿಸಿಐ ಹೊಸ ವೇಳಾಪಟ್ಟಿಯನ್ನು ರೂಪಿಸಲಿದೆ. ಹಿಂದಿನ 2021 ರ ಕೊರೋನಾ ಸಂದರ್ಭದಲ್ಲಿ ಲೀಗ್ ಅನ್ನು ಯುಎಇಯಲ್ಲಿ ಮುಂದುವರಿಸಿದ ಅನುಭವವನ್ನು ಗಮನದಲ್ಲಿಟ್ಟುಕೊಂಡು, ಈ ಬಾರಿ ಕೂಡ ಮರುನಿಗದಿಗೆ ಅವಕಾಶವಿದೆ.
ಇನ್ನು ಮುಂದೆ ಬಿಸಿಸಿಐ ಯಾವ ದಿನಾಂಕ ಮತ್ತು ಸ್ಥಳದಲ್ಲಿ ಪಂದ್ಯಗಳನ್ನು ನಡೆಸಲಿದೆ ಎಂಬ ನಿರ್ಧಾರ ಪ್ರತ್ಯೀಕ್ಷೆಯಲ್ಲಿದೆ.