ಮೃತ ಒತ್ತೆಯಾಳುಗಳ ಪಟ್ಟಿಯನ್ನು ಗುರುವಾರ ಬಿಡುಗಡೆ ಮಾಡಲಾಗುವುದು ಎಂದು ಇಸ್ರೇಲ್ (Israel) ಹೇಳಿದ್ದು, ಪ್ರಧಾನಿ ಬೆಂಜಮಿನ್ ನೆತನ್ಯಾಹು (Prime Minister Benjamin Netanyahu) ಅವರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಇಸ್ರೇಲ್ನ ನಾಲ್ಕು ಮೃತ ಒತ್ತೆಯಾಳುಗಳ ಪಾರ್ಥಿವ ಶರೀರಗಳನ್ನು ಕರೆತರಲು ತಯಾರಿ ನಡೆಸುತ್ತಿದೆ ಎಂದು ನೆತನ್ಯಾಹು ಹೇಳಿದ್ದಾರೆ.
ಒತ್ತೆಯಾಳುಗಳು ಮತ್ತು ಕಾಣೆಯಾದವರ ಮಾಹಿತಿ ಸಂಯೋಜಕ ಬ್ರಿಗ್-ಜನರಲ್ (ರೆಸ್.) ಗಾಲ್ ಹಿರ್ಷ್ IDF ಪ್ರತಿನಿಧಿಗಳ ಮೂಲಕ ಒತ್ತೆಯಾಳುಗಳ ಕುಟುಂಬಗಳಿಗೆ ಮಾಹಿತಿ ನೀಡಿದ್ದಾರೆ.”
ಇನ್ನು ಇಂತಹ ದುರಂತಗಳು ಮತ್ತೆ ಸಂಭವಿಸದಂತೆ ನೋಡಿಕೊಳ್ಳುವುದಾಗಿ ಹೇಳಿದ ಪ್ರಧಾನಿ, ರಾಷ್ಟ್ರದ ಸಂಕಲ್ಪವನ್ನು ಒತ್ತಿ ಹೇಳಿದರು. “ನಾಳೆ ಇಸ್ರೇಲ್ ದೇಶಕ್ಕೆ ಬಹಳ ಕಷ್ಟದ ದಿನವಾಗಿದೆ. ಒಂದು ದುಃಖದ ದಿನ. ದೇಶಕ್ಕಾಗಿ ಪ್ರಾಣಬಿಟ್ಟ ನಾಲ್ವರನ್ನು ಅವರ ಮನೆಗೆ ಕರೆತರುತ್ತಿದ್ದೇವೆ. ಇಡೀ ರಾಷ್ಟ್ರದ ಹೃದಯ ಚೂರುಚೂರಾಗಿದೆ. ನಾವು ದುಃಖಿಸುತ್ತಿದ್ದೇವೆ, ನಾವು ನೋವಿನಲ್ಲಿದ್ದೇವೆ. ಆದರೆ ಇನ್ನು ಮುಂದೆ ಮತ್ತೆ ಹೀಗಾಗುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ನಾವು ನಿರ್ಧರಿಸಿದ್ದೇವೆ” ಎಂದು ಕಣ್ಣೀರಿಟ್ಟಿದ್ದಾರೆ.
ಕಳೆದ ಜನವರಿಯಲ್ಲಿ ಇಸ್ರೇಲ್ ಮತ್ತು ಹಮಾಸ್ ನಡುವಿನ ಕದನ ವಿರಾಮ ಒಪ್ಪಂದ ಜಾರಿಗೆ ಬಂದಿದೆ. ಒಪ್ಪಂದದ ಮೊದಲ ದಿನವೇ ಗಾಜಾದಲ್ಲಿ ಹಮಾಸ್ ಸೆರೆಯಲ್ಲಿದ್ದ ಮೂವರು ಮಹಿಳೆಯರು ಬಿಡುಗಡೆಯಾಗಿದ್ದರು. ಈ ಮೂಲಕ ಹಮಾಸ್ ನಿಂದ ಅಪಹರಣಕ್ಕೆ ಒಳಗಾಗಿ 471 ದಿನಗಳ ಸೆರೆಯಲ್ಲಿದ್ದ ಇವರು ಬಿಡುಗಡೆಗೊಂಡಿದ್ದರು.
ಆ ಬಳಿಕ ಹಂತ ಹಂತವಾಗಿ ಇಸ್ರೇಲ್ ಒತ್ತೆಯಾಳುಗಳನ್ನು ಹಮಾಸ್ ಬಿಡುಗಡೆ ಮಾಡುತ್ತಾ ಬಂದಿದೆ. ಇದೀಗ ಒತ್ತೆ ಸಮಯದಲ್ಲಿ ಮೃತರಾದ ಇಸ್ರೇಲಿಗರ ಶವಗಳನ್ನು ಹಮಾಸ್ ಹಸ್ತಾಂತರ ಮಾಡಲು ಮುಂದಾಗಿದೆ. ಒಪ್ಪಂದದ ಪ್ರಕಾರ, ಇಸ್ರೇಲ್ ಕೂಡಾ ಬಂಧಿತ ಪ್ಯಾಲಿಸ್ತೇನಿ ಕೈದಿಗಳನ್ನು ಬಿಡುಗಡೆ ಮಾಡಿದೆ.