Jerusalem: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Prime Minister Netanyahu) ಅಸ್ವಸ್ಥರಾಗಿದ್ದು, ಅವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಅವರಿಗೆ ಆಹಾರ ವಿಷಬಾಧೆಯಿಂದ ಕರುಳಿನಲ್ಲಿ ಉರಿಯೂತ ಉಂಟಾಗಿದೆ ಎಂದು ಅವರ ಕಚೇರಿ ತಿಳಿಸಿದೆ. ಚಿಕಿತ್ಸೆ ನಂತರ ಅವರು ಈಗ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಮುಂದಿನ ಮೂರು ದಿನಗಳ ಕಾಲ ಮನೆಯಿಂದಲೇ ಅವರು ಕೆಲಸ ನಿರ್ವಹಿಸಲಿದ್ದಾರೆ.
ಜೆರುಸಲೆಮ್ನ ಹಡಸ್ಸಾ-ಐನ್ ಕೆರೆಮ್ ಆಸ್ಪತ್ರೆಯ ವೈದ್ಯರು ರಾತ್ರಿಯಿಡೀ ಅವರ ಆರೋಗ್ಯದ ಮೇಲೆ ನಿಗಾ ವಹಿಸಿದ್ದರು. ಅವರಿಗೆ ದ್ರವ ಚಿಕಿತ್ಸೆ ನೀಡಲಾಗಿದ್ದು, ಈಗ ಸ್ಥಿತಿ ಚೇತರಿಕೆಯಲ್ಲಿದೆ.
- 75 ವರ್ಷದ ನೆತನ್ಯಾಹು ಕಳೆದ ಕೆಲವು ವರ್ಷಗಳಿಂದ ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
- ಮೇನಲ್ಲಿ ಕೊಲೊನೋಸ್ಕೋಪಿ
- ಡಿಸೆಂಬರ್‌ನಲ್ಲಿ ಮೂತ್ರನಾಳದ ಸೋಂಕು ಮತ್ತು ಪ್ರಾಸ್ಟೇಟ್ ಶಸ್ತ್ರಚಿಕಿತ್ಸೆ
- ಮಾರ್ಚ್ ನಲ್ಲಿ ಹರ್ನಿಯಾ ಶಸ್ತ್ರಚಿಕಿತ್ಸೆ ಮತ್ತು ಪೇಸ್ಮೇಕರ್ ಅಳವಡಿಕೆ
- ಈ ಎಲ್ಲಾ ಸಂದರ್ಭಗಳಲ್ಲಿ ಅವರು ಕೆಲ ದಿನಗಳ ಕಾಲ ತಮ್ಮ ಕರ್ತವ್ಯಗಳಿಂದ ದೂರವಿದ್ದರು.
ಜನವರಿ 2023ರಲ್ಲಿ ಅವರ ವೈಯಕ್ತಿಕ ವೈದ್ಯಕೀಯ ತಂಡದಿಂದ ಪೂರ್ಣ ಆರೋಗ್ಯ ವರದಿ ಬಿಡುಗಡೆ ಮಾಡಲಾಗಿತ್ತು. ಆದರೆ ಅದು ಅಧಿಕೃತ ಸರ್ಕಾರಿ ವರದಿ ಅಲ್ಲ. ಇಸ್ರೇಲ್ ಸರ್ಕಾರದ ನಿಯಮ ಪ್ರಕಾರ, ಪ್ರಧಾನಿ ವಾರ್ಷಿಕ ಆರೋಗ್ಯ ವರದಿ ನೀಡಬೇಕಾದರೂ, 2016 ರಿಂದ 2023 ರವರೆಗೆ ನೆತನ್ಯಾಹು ಯಾವುದೇ ವರದಿ ನೀಡಿಲ್ಲ.
ಡಾಕ್ಟರ್ ನಿಷೇಧಿಸಿದರೂ, ಅವರು ಆಸ್ಪತ್ರೆಯಿಂದ ನೇರವಾಗಿ ಸಂಸತ್‌ಗೆ ಹೋಗಿ ‘ಟ್ರ್ಯಾಪ್ಡ್ ಪ್ರಾಫಿಟ್ಸ್ ಲಾ’ ಮೇಲಿನ ಮಹತ್ವದ ಮತದಾನದಲ್ಲಿ ಭಾಗವಹಿಸಿದ್ದರು.