Jerusalem: ಇಸ್ರೇಲಿನ ದೇಶೀಯ ಗುಪ್ತಚರ ಸಂಸ್ಥೆ ಶಿನ್ ಬೆಟ್ ಮುಖ್ಯಸ್ಥ ರೋನೆನ್ ಬಾರ್ (Ronen Bar, the head of Israel’s domestic intelligence agency,) ಅವರನ್ನು ಸೋಮವಾರ ವಜಾಗೊಳಿಸಲಾಗಿದೆ. ಅಕ್ಟೋಬರ್ 7, 2023 ರಂದು ನಡೆದ ಘಟನೆಯ ನಂತರ ಅವರ ಮೇಲೆ ವಿಶ್ವಾಸ ಉಳಿಸಲು ಸಾಧ್ಯವಾಗಿಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ ಕೆಲವೇ ದಿನಗಳ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ.
ಸರ್ಕಾರ ನೆತನ್ಯಾಹು ಅವರ ಪ್ರಸ್ತಾವನೆಗೆ ಸರ್ವಾನುಮತದಿಂದ ಅನುಮೋದನೆ ನೀಡಿದ್ದು, ಏಪ್ರಿಲ್ 10ರೊಳಗೆ ಅಥವಾ ಹೊಸ ನೇಮಕಾತಿ ಆದ ನಂತರ ಬಾರ್ ತಮ್ಮ ಹುದ್ದೆಯನ್ನು ತ್ಯಜಿಸಲಿದ್ದಾರೆ ಎಂದು ಹೇಳಲಾಗಿದೆ. 1993ರಲ್ಲಿ ಗುಪ್ತಚರ ಸಂಸ್ಥೆಗೆ ಸೇರಿದ್ದ ಬಾರ್, 2021ರಲ್ಲಿ ಶಿನ್ ಬೆಟ್ ಮುಖ್ಯಸ್ಥನಾಗಿ ನೇಮಕಗೊಂಡಿದ್ದರು.
ಗಾಜಾದ ಯುದ್ಧಕ್ಕೆ ದಾರಿ ಮಾಡಿಕೊಟ್ಟ ಅಕ್ಟೋಬರ್ 7ರ ಹಮಾಸ್ ದಾಳಿಯ ಮೊದಲೇ ಬಾರ್ ಮತ್ತು ನೆತನ್ಯಾಹು ನಡುವಿನ ಸಂಬಂಧ ಹದಗೆಟ್ಟಿತ್ತು. ನೆತನ್ಯಾಹು ಮುಂದಾಳತ್ವದ ನ್ಯಾಯಾಂಗ ಸುಧಾರಣೆಗಳ ವಿಷಯದಲ್ಲಿ ಬಾರ್ ವಿರುದ್ಧ ಸ್ಥಿತಿ ತೀವ್ರವಾಗಿತ್ತು.
ಶಿನ್ ಬೆಟ್ ವೈಫಲ್ಯದ ಬಗ್ಗೆ ಮಾರ್ಚ್ 4ರಂದು ಪ್ರಕಟವಾದ ಆಂತರಿಕ ವರದಿ ಮತ್ತಷ್ಟು ವಿವಾದ ಸೃಷ್ಟಿಸಿತು. ಈ ವರದಿಯ ಪ್ರಕಾರ, ಶಿನ್ ಬೆಟ್ ದಾಳಿಯನ್ನು ತಡೆಗಟ್ಟುವಲ್ಲಿ ವಿಫಲವಾಗಿತ್ತು ಮತ್ತು ಹಮಾಸ್ ಮಿಲಿಟರಿಯನ್ನು ಸಂಘಟಿಸಲು ಅವಕಾಶ ಮಾಡಿಕೊಟ್ಟಿತ್ತು. ಬಾರ್ ಈ ಹಿಂದೆ ತಾನು ಶೀಘ್ರದಲ್ಲೇ ರಾಜೀನಾಮೆ ನೀಡಲು ಉದ್ದೇಶಿಸಿದ್ದಾಗಿ ಸುಳಿವು ನೀಡಿದ್ದರು.
ಬಾರ್ ವಜಾಗೊಂಡ ನಂತರ ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಈ ನಿರ್ಧಾರ ಇಸ್ರೇಲ್ ಪ್ರಜಾಪ್ರಭುತ್ವಕ್ಕೆ ಅಪಾಯ ಎಂದು ಆರೋಪಿಸಿವೆ. ಜೆರುಸಲೇಂನಲ್ಲಿ ನೆತನ್ಯಾಹು ಅವರ ನಿವಾಸದ ಹೊರಗೆ ಹಾಗೂ ಇಸ್ರೇಲ್ ಸಂಸತ್ತಿನ ಎದುರು ಸಾವಿರಾರು ಜನರು ಪ್ರತಿಭಟನೆ ನಡೆಸಿದ್ದಾರೆ.