ಭಾರತೀಯ ಬಾಹ್ಯಾಕಾಶ ಸಂಸ್ಥೆ (ISRO) ಲಡಾಖ್ನ ತ್ಸೋ ಕರ್ ಕಣಿವೆಯಲ್ಲಿ ‘ಹಿಮಾಲಯನ್ ಔಟ್‌ಪೋಸ್ಟ್ ಫಾರ್ ಪ್ಲಾನೆಟರಿ ಎಕ್ಸ್‌ಪ್ಲೋರೇಷನ್’ (HOPE) ಎಂಬ ವಿಶೇಷ ಕೇಂದ್ರವನ್ನು ಸ್ಥಾಪಿಸಿದೆ. ಇದು ಮಂಗಳ ಗ್ರಹದಂತಹ ಪರಿಸ್ಥಿತಿಯುಳ್ಳ ಸ್ಥಳವಾಗಿದ್ದು, ಭವಿಷ್ಯದ ಚಂದ್ರ ಮತ್ತು ಮಂಗಳ ಗ್ರಹ ಯಾತ್ರೆಗಳಿಗೆ ಬೇಕಾದ ತಂತ್ರಜ್ಞಾನ, ಜೀವ ಬೆಂಬಲ ವ್ಯವಸ್ಥೆಗಳನ್ನು ಪರೀಕ್ಷಿಸಲು ಉಪಯೋಗವಾಗಲಿದೆ.
ಈ ಕೇಂದ್ರದಲ್ಲಿ ಮನುಷ್ಯರು ಮಂಗಳ ಗ್ರಹದಂತೆಯೇ ಕಠಿಣ ಪರಿಸ್ಥಿತಿಯಲ್ಲಿ ಹೇಗೆ ಜೀವಿಸುತ್ತಾರೆ ಎಂಬುದನ್ನು ಪರೀಕ್ಷಿಸಲಾಗುತ್ತದೆ. ಈ ಕಾರ್ಯಾಚರಣೆಗೆ ISRO ಅಧ್ಯಕ್ಷ ಡಾ. ವಿ. ನಾರಾಯಣನ್ ಜುಲೈ 31ರಂದು ಚಾಲನೆ ನೀಡಿದರು. ಈ ಯೋಜನೆಗೆ ಖಾಸಗಿ ಉದ್ಯಮಗಳು ಮತ್ತು ವಿಜ್ಞಾನ ಸಂಸ್ಥೆಗಳ ಸಹಕಾರವಿದೆ.
HOPE ಮಿಷನ್: ಇದು ಭವಿಷ್ಯದ ಬಾಹ್ಯಾಕಾಶ ಯಾತ್ರೆಗಳ ಪೂರ್ವಭ್ಯಾಸವಾಗಿದ್ದು, ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ಸ್ವತಂತ್ರ ಪ್ರಯೋಗಾಲಯ ನಿರ್ಮಿಸಿಕೊಳ್ಳಲು ಹೆಜ್ಜೆ ಇಟ್ಟಂತಾಗಿದೆ. ಲಡಾಖ್ನ ಪುಗಾ ಕಣಿವೆಯಲ್ಲಿಯೂ ಅಧ್ಯಯನ ನಡೆಯುತ್ತಿದೆ. ಇಲ್ಲಿ ಜೀವದ ಮೂಲಗಳ ಸುಳಿವುಗಳತ್ತ ವಿಜ್ಞಾನಿಗಳು ಗಮನ ಹರಿಸಿದ್ದಾರೆ.
ಮೇಲ್ಮೈ ಪರೀಕ್ಷೆಗಳು ಏನು
- ಶಾರೀರಿಕ ಪರೀಕ್ಷೆ: ಕಡಿಮೆ ಆಮ್ಲಜನಕವಿರುವ ಪರಿಸ್ಥಿತಿಯಲ್ಲಿ ದೇಹದ ಪ್ರತಿಕ್ರಿಯೆಗಳನ್ನು ಪರೀಕ್ಷಿಸಲಾಗುತ್ತಿದೆ.
- ಮಾನಸಿಕ ಪರೀಕ್ಷೆ: ಒತ್ತಡದ ಸಂದರ್ಭಗಳಲ್ಲಿ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಅಳೆಯಲಾಗುತ್ತಿದೆ.
- ತಂತ್ರಜ್ಞಾನ ಪರೀಕ್ಷೆ: ಬಾಹ್ಯಾಕಾಶ ಸೂಟು ಮತ್ತು ಉಪಕರಣಗಳನ್ನು ಮಂಗಳ ಪರಿಸರದಲ್ಲಿ ಪರೀಕ್ಷಿಸಲಾಗುತ್ತಿದೆ.
- ತುರ್ತು ಪರಿಸ್ಥಿತಿಗಳ ವ್ಯಾಯಾಮ: ಅಪಾಯದ ಸಂದರ್ಭಗಳಲ್ಲಿ ಸಿಬ್ಬಂದಿ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಪರೀಕ್ಷಿಸಲಾಗುತ್ತಿದೆ.
ಯಾಕೆ ತ್ಸೋ ಕರ್ ಕಣಿವೆ ಆಯ್ಕೆ: ಇಲ್ಲಿ ಕಡಿಮೆ ಆಮ್ಲಜನಕ, ತೀವ್ರ ತಂಪು, ಒಣ ವಾತಾವರಣ, ಲವಣಯುಕ್ತ ಭೂಮಿಯಂತಹ ಸವಾಲುಗಳಿವೆ. ಇವೆಲ್ಲವೂ ಮಂಗಳ ಗ್ರಹದ ಪರಿಸ್ಥಿತಿಗೆ ಹೋಲಿಕೆ ಹೊಂದಿವೆ. ಈ ಪ್ರದೇಶದಲ್ಲಿ ISRO HOPE ನಿಲ್ದಾಣವನ್ನು ನಿರ್ಮಿಸಿದೆ.
ಪರೀಕ್ಷೆ ನಡೆಯುತ್ತಿರುವ ಅವಧಿ: ಆಗಸ್ಟ್ 1 ರಿಂದ 10 ರವರೆಗೆ 10 ದಿನಗಳ ಕಾಲ ಈ ಕಾರ್ಯಾಚರಣೆ ನಡೆಯುತ್ತಿದೆ. ಇಬ್ಬರು ಸಿಬ್ಬಂದಿ ನೈಜ ಪರಿಸ್ಥಿತಿಯಲ್ಲಿ ವಿವಿಧ ಶಾರೀರಿಕ, ಮಾನಸಿಕ, ತಂತ್ರಜ್ಞಾನಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸುತ್ತಿದ್ದಾರೆ.
ಈ ಯೋಜನೆಯಿಂದ ಏನು ಲಾಭ
- ಭವಿಷ್ಯದ ಮಿಷನ್‌ಗಳಿಗೆ ಬೇಕಾದ ನಿಖರ ಮಾಹಿತಿ ದೊರೆಯುತ್ತದೆ.
- ಭಾರತದಿಂದ ಬಾಹ್ಯಾಕಾಶಕ್ಕೆ ಮನುಷ್ಯರನ್ನು ಕಳುಹಿಸುವ ಪ್ರಯತ್ನಕ್ಕೆ ಬಲ ಸಿಗುತ್ತದೆ.
- ತಂತ್ರಜ್ಞಾನ ಮತ್ತು ಜೀವಶಾಸ್ತ್ರದ ಅಭಿವೃದ್ಧಿಗೆ ಇಂಥ ಕೇಂದ್ರಗಳು ಬಹುಮುಖ್ಯವಾಗುತ್ತವೆ.
ಲಡಾಖ್‌ನಲ್ಲಿ ಸ್ಥಾಪಿಸಿರುವ HOPE ಮಿಷನ್, ಭಾರತವನ್ನು ಬಾಹ್ಯಾಕಾಶ ವಿಜ್ಞಾನದಲ್ಲಿ ಮುಂದುವರೆಸುವ ಮಹತ್ತರ ಹೆಜ್ಜೆಯಾಗಿದ್ದು, ಭವಿಷ್ಯದ ಗ್ರಹ ಯಾತ್ರೆಗಳಿಗೆ ದೇಶ ಸಜ್ಜಾಗುತ್ತಿದೆ.