Sriharikota: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO-Indian Space Research Organisation) ಬಾಹ್ಯಾಕಾಶದಲ್ಲಿ ಎರಡು ಉಪಗ್ರಹಗಳನ್ನು ಯಶಸ್ವಿಯಾಗಿ ಜೋಡಿಸುವ (Docking) ಪ್ರಯೋಗವನ್ನು ಆರಂಭಿಸಿದೆ. PSLV-ಸಿ60 ನೌಕೆಯು ಸೋಮವಾರ ರಾತ್ರಿ 220 ಕೆಜಿ ತೂಕದ ‘ಟಾರ್ಗೆಟ್’ ಮತ್ತು ‘ಚೇಸರ್’ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿ, ಡಾಕಿಂಗ್ ಪ್ರಕ್ರಿಯೆಗೆ ಅಗತ್ಯವಾದ ಮೊದಲ ಹಂತವನ್ನು ಸಾಧಿಸಿದೆ.
ಡಾಕಿಂಗ್ ಪ್ರಯೋಗ
ಬಾಹ್ಯಾಕಾಶದಲ್ಲಿ ಎರಡು ಉಪಗ್ರಹಗಳನ್ನು ಜೋಡಿಸುವ ಪ್ರಕ್ರಿಯೆಯನ್ನು ಡಾಕಿಂಗ್ ಎನ್ನುತ್ತಾರೆ. ಅಂದರೆ, ಕಕ್ಷೆಯಲ್ಲಿರುವ ಪ್ರತ್ಯೇಕ ಉಪಗ್ರಹಗಳನ್ನು ಯಾವುದೇ ನೌಕೆಗಳಿಲ್ಲದೇ, ಪರಸ್ಪರ ಜೋಡಿಸುವ ಕ್ಷಿಷ್ಟಕರ ವಿಧಾನವಾಗಿದೆ. ಉಪಗ್ರಹಗಳು ಸಂಧಿಸಲು ಸೆನ್ಸಾರ್ಗಳನ್ನ ಬಳಸಲಾಗುತ್ತದೆ.
ವಿಶ್ವದಲ್ಲಿ ಬಾಹ್ಯಾಕಾಶದಲ್ಲಿ ಡಾಕಿಂಗ್ ತಂತ್ರಜ್ಞಾನ ಹೊಂದಿರುವ ಮೂರು ದೇಶಗಳು ಮಾತ್ರ ಇವೆ. ಚೀನಾ, ಅಮೆರಿಕ ಮತ್ತು ರಷ್ಯಾ. ಇಸ್ರೋ ಈ ತಂತ್ರಜ್ಞಾನದಲ್ಲಿ ಮುಂದುವರಿದರೆ, ಭಾರತವು ಡಾಕಿಂಗ್ ಪ್ರಯೋಗಗಳಲ್ಲಿ ಯಶಸ್ವಿಯಾದ ನಾಲ್ಕನೇ ರಾಷ್ಟ್ರವಾಗಲಿದೆ.
2035ರೊಳಗೆ ಇಸ್ರೋ ತನ್ನದೇ ಆದ ಬಾಹ್ಯಾಕಾಶ ನಿಲ್ದಾಣವನ್ನು ಸ್ಥಾಪಿಸಲು ಗುರಿ ಹೊಂದಿದೆ. ಈ ಡಾಕಿಂಗ್ ಪ್ರಯೋಗವು ಆ ನಿಲ್ದಾಣಕ್ಕೆ ಬಾಹ್ಯಾಕಾಶ ಯಾನಗಳನ್ನು ಕಳುಹಿಸುವ, ಮರಳಿ ತರಲು ಹಾಗೂ ಉಪಕರಣಗಳನ್ನು ಡಾಕಿಂಗ್ ಹಾಗೂ ಅನ್ಡಾಕಿಂಗ್ ಮಾಡಲು ಬೇಕಾದ ಪರಿಣತಿಯನ್ನು ನೀಡಲಿದೆ. ಈ ತಂತ್ರಜ್ಞಾನವು ಮಾನವಸಹಿತ ಅಂತರಿಕ್ಷಯಾನ, ಚಂದ್ರನ ಯಾತ್ರೆಗಳಿಗೂ ಮಹತ್ವದ್ದಾಗಿದೆ.