
Bengaluru: ರಾಜ್ಯದಲ್ಲಿ ಇತ್ತೀಚೆಗೆ ವಿದ್ಯುತ್, ಹಾಲು, ಸಾರಿಗೆ, ಮೆಟ್ರೋ ದರ ಏರಿಕೆ ಕಂಡು ಬಂದಿದೆ. ಇದರ ಹಿಂದೆ ಗ್ಯಾರಂಟಿ ಯೋಜನೆಗಳೇ ಕಾರಣ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿವೆ. ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (B.Y. Vijayendra) ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ, ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
“ಚುನಾವಣೆ ಬಂದಾಗ ಮಾತ್ರ ಗ್ಯಾರಂಟಿ ಹಣ ಹರಿಸುತ್ತೀರಿ. ಜನರನ್ನು ಭಿಕ್ಷುಕರು ಎಣಿಸುತ್ತೀರಾ?” ಎಂದು ಅವರು ಪ್ರಶ್ನೆ ಮಾಡಿದರು. ಸಿದ್ದರಾಮಯ್ಯ ಅನುಭವಿ ಮುಖ್ಯಮಂತ್ರಿ, 16ನೇ ಬಜೆಟ್ ಮಂಡನೆಗೆ ಸಿದ್ಧರಾಗಿದ್ದಾರೆ. ಆದರೆ ರಾಜ್ಯದ ಹಣಕಾಸು ಪರಿಸ್ಥಿತಿ ಜನರಿಗೆ ತಿಳಿಸಲು ಸರ್ಕಾರ ಹಿಂಜರಿಯುತ್ತಿದೆ ಎಂದು ಅವರು ಆರೋಪಿಸಿದರು.
ಕಾಂಗ್ರೆಸ್ ಕೊಟ್ಟ ಭರವಸೆಗಳು ಜನರಿಗೆ ಅನುಕೂಲವಾಗಿಲ್ಲ. ಒಂದೆಡೆ ಗ್ಯಾರಂಟಿಗಳ ಬಗ್ಗೆ ಮಾತನಾಡುತ್ತಾ, ಮತ್ತೊಂದೆಡೆ ಬೆಲೆ ಏರಿಕೆ ಮಾಡುತ್ತಿದ್ದಾರೆ ಎಂದು ವಿಜಯೇಂದ್ರ ಕಿಡಿಕಾರಿದರು.
“ಈ ಸರ್ಕಾರ ಬಂದ ಎರಡೂ ವರ್ಷದಲ್ಲಿ 1.90 ಲಕ್ಷ ಕೋಟಿ ಸಾಲ ಮಾಡಿದೆ. ಇಂಧನ ಸಚಿವ ಜಾರ್ಜ್ ಹೇಳುವಂತೆ, 6 ಸಾವಿರ ಕೋಟಿ ವಿದ್ಯುತ್ ಬಿಲ್ ಬಾಕಿಯಾಗಿದೆ. ಸರ್ಕಾರದಲ್ಲಿ ನಿಖರವಾಗಿ ಏನು ನಡೆಯುತ್ತಿದೆ?” ಎಂದು ಅವರು ಪ್ರಶ್ನಿಸಿದರು.