Davanagere: ಮಧ್ಯ ಕರ್ನಾಟಕದ ಕೇಂದ್ರ ಬಿಂದು ಆಗಿರುವ ಬೆಣ್ಣೆನಗರಿ ದಾವಣಗೆರೆಯಲ್ಲಿ ಐಟಿ ಪಾರ್ಕ್ (IT Park) ಆರಂಭಿಸಲು ತಯಾರಿ ನಡೆಯುತ್ತಿದೆ. ಈಗಾಗಲೇ ಅಧಿಕಾರಿಗಳು 3-4 ಕಡೆ ಸ್ಥಳ ಪರಿಶೀಲನೆ ಮಾಡಿ ಗುರುತಿಸಿದ್ದಾರೆ.
ದಾವಣಗೆರೆಯಲ್ಲಿ ಐಟಿ ಪಾರ್ಕ್ ಆರಂಭಿಸಲು 2 ಎಕರೆ ಜಾಗ ಮತ್ತು 50 ಸಾವಿರ ಚದರ ಅಡಿ ಕಟ್ಟಡ ಬೇಕಾಗಿದೆ ಎಂದು ಕೇಂದ್ರ ಸಚಿವ ಜಿತಿನ್ ಪ್ರಸಾದ್ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ ಸ್ಥಳ ಪರಿಶೀಲನೆ ಮಾಡಿರುವುದಾಗಿ ತಿಳಿಸಿದ್ದಾರೆ.
ಐಟಿ ಪಾರ್ಕ್ ಆರಂಭವಾದರೆ ದಾವಣಗೆರೆಯ ಜೊತೆಗೆ ಚಿತ್ರದುರ್ಗ, ಬಳ್ಳಾರಿ, ಶಿವಮೊಗ್ಗ ಜಿಲ್ಲೆಯ ಪದವೀಧರರಿಗೆ ಬೆಂಗಳೂರಿಗೆ ಹೋಗುವ ಅವಶ್ಯಕತೆ ಕಡಿಮೆಯಾಗಲಿದೆ. ಸ್ಥಳೀಯ ಉದ್ಯೋಗ ಸಿಗುವುದರ ಜೊತೆಗೆ ಪ್ರಾದೇಶಿಕ ಅಭಿವೃದ್ಧಿಗೆ ಉತ್ತೇಜನ ದೊರೆಯಲಿದೆ.
ದಾವಣಗೆರೆಗೆ ಈಗಾಗಲೇ ವಂದೇ ಭಾರತ್ ರೈಲು ಸೇವೆ, ಹತ್ತಿರದಲ್ಲೇ ಶಿವಮೊಗ್ಗ ಮತ್ತು ಹುಬ್ಬಳ್ಳಿ ವಿಮಾನ ನಿಲ್ದಾಣಗಳಿರುವುದರಿಂದ ಪ್ರಯಾಣ ಸುಗಮವಾಗಿದೆ. ಜೊತೆಗೆ ಉತ್ತಮ ಹೆದ್ದಾರಿ ಸಂಪರ್ಕವೂ ಇದೆ.
ಈಗಾಗಲೇ ದಾವಣಗೆರೆಯ ಜೆ.ಹೆಚ್. ಪಟೇಲ್ ಬಡಾವಣೆಯಲ್ಲಿ ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ ಆಫ್ ಇಂಡಿಯಾ (STPI) ಉಪಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಇದನ್ನು ವಿಸ್ತರಿಸಿ ಐಟಿ ಪಾರ್ಕ್ ಮಾಡುವ ಯೋಜನೆ ಮುಂದುವರಿಯುತ್ತಿದೆ.
ಒಟ್ಟಿನಲ್ಲಿ, ದಾವಣಗೆರೆಯಲ್ಲಿ ಐಟಿ ಪಾರ್ಕ್ ಆರಂಭವಾದರೆ ಬೆಂಗಳೂರಿನ ಮೇಲಿನ ಒತ್ತಡ ಕಡಿಮೆಯಾಗುವುದರ ಜೊತೆಗೆ ಸ್ಥಳೀಯರಿಗೆ ದೊಡ್ಡ ಅವಕಾಶ ದೊರೆಯಲಿದೆ.