Bengaluru: ಪಿಇಎಸ್ (PES) ಶಿಕ್ಷಣ ಸಂಸ್ಥೆ ಮೇಲೆ ಇಂದು ಬೆಳಿಗ್ಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಳಗ್ಗೆ 6 ಗಂಟೆಗೆ ಪ್ರಾರಂಭವಾದ ಈ ದಾಳಿಯಲ್ಲಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಆದಾಯಕ್ಕೂ ಮೀರಿದ ಆಸ್ತಿ ಹೊಂದಿದ ಆರೋಪದ ಹಿನ್ನೆಲೆಯಲ್ಲಿ ದಾಳಿ ನಡೆದಿದೆ ಎನ್ನಲಾಗಿದೆ.
ದಿವಂಗತ ದೊರೆಸ್ವಾಮಿ ನಾಯ್ಡು ಸ್ಥಾಪಿಸಿದ್ದ ಪಿಇಎಸ್ ಶಿಕ್ಷಣ ಸಂಸ್ಥೆಗೆ ಸೇರಿದ ಹೊಸಕೆರೆಹಳ್ಳಿ ಪಿಇಎಸ್ ಕಾಲೇಜು, ಎಲೆಕ್ಟ್ರಾನಿಕ್ ಸಿಟಿ ಕಾಲೇಜು, ಹನುಮಂತನಗರ ಕಾಲೇಜು, ಆಂಧ್ರದ ಕುಪ್ಪಂ ಕಾಲೇಜು ಸೇರಿದಂತೆ ಹಲವು ಸ್ಥಳಗಳಲ್ಲಿ ದಾಳಿ ನಡೆದಿದೆ. ಬನಶಂಕರಿ ಬಿಡಿಎ ಕಾಂಪ್ಲೆಕ್ಸ್ ಬಳಿಯ ದೊರೆಸ್ವಾಮಿ ನಾಯ್ಡು ಮನೆ ಹಾಗೂ ಅವರ ಸಂಬಂಧಿಕರ ಮನೆಗಳ ಮೇಲೂ ಶೋಧ ನಡೆಸಲಾಗಿದೆ.
ಚೆನ್ನೈ, ಮಂಗಳೂರು ಮತ್ತು ಆಂಧ್ರದಿಂದ ಬಂದ ಸುಮಾರು 200ಕ್ಕೂ ಹೆಚ್ಚು ಅಧಿಕಾರಿಗಳು ಏಕಕಾಲಕ್ಕೆ ಎಲ್ಲಾ ಕಡೆ ದಾಳಿ ನಡೆಸಿದ್ದಾರೆ. ದಾಖಲೆಗಳ ಪರಿಶೀಲನೆ ಇನ್ನೂ ಮುಂದುವರಿದಿದೆ. ಇದೇ ವರ್ಷ ಮಾರ್ಚ್ 25ರಂದು ದೊರೆಸ್ವಾಮಿ ನಾಯ್ಡು ನಿಧನರಾಗಿದ್ದು, ಸದ್ಯ ಅವರ ಪುತ್ರ ಜವಹರ್ ದೊರೆಸ್ವಾಮಿ ಪಿಇಎಸ್ ಶಿಕ್ಷಣ ಸಂಸ್ಥೆ ನೋಡಿಕೊಳ್ಳುತ್ತಿದ್ದಾರೆ.
ಸೆಪ್ಟೆಂಬರ್ 12ರಂದು ಬೆಂಗಳೂರಿನ ಪೋಥಿಸ್ ಬಟ್ಟೆ ಶೋ ರೂಮ್ ಮೇಲೂ ಐಟಿ ದಾಳಿ ನಡೆದಿತ್ತು. ಮೈಸೂರು ರಸ್ತೆಯ ಟೆಂಬರ್ ಲೇಔಟ್ ಮತ್ತು ಗಾಂಧಿನಗರದಲ್ಲಿರುವ ಪೋಥಿಸ್ ಮಳಿಗೆಗಳ ಮೇಲೆ 25ಕ್ಕೂ ಹೆಚ್ಚು ಅಧಿಕಾರಿಗಳ ತಂಡ ಶೋಧ ನಡೆಸಿತ್ತು. ತಮಿಳುನಾಡಿನ ಉದ್ಯಮಿಗೆ ಸೇರಿದ ಈ ಮಳಿಗೆಗಳ ಮೇಲಿನ ದಾಳಿ ಚೆನ್ನೈಯಿಂದ ಬಂದ ಅಧಿಕಾರಿಗಳಿಂದ ನಡೆದಿದೆ.