Tokyo: ಜಪಾನ್‌ನಲ್ಲಿ ದೊಡ್ಡ ರಾಜಕೀಯ ಬೆಳವಣಿಗೆ ನಡೆದಿದೆ. ಕಳೆದ ಜುಲೈನಲ್ಲಿ ನಡೆದ ಚುನಾವಣೆಯಲ್ಲಿ ಭಾರೀ ಸೋಲಿನ ನಂತರ ಪ್ರಧಾನಿ ಶಿಗೇರು ಇಶಿಬಾ ಅವರು ತಮ್ಮ ಹುದ್ದೆಗೆ ರಾಜೀನಾಮೆ ಘೋಷಿಸಿದ್ದಾರೆ.
ಇಶಿಬಾ ಅವರು ಲಿಬರಲ್ ಡೆಮಾಕ್ರಟಿಕ್ ಪಕ್ಷದ (ಎಲ್‌ಡಿಪಿ) ಅಧ್ಯಕ್ಷ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ. ನಾಯಕತ್ವ ಬದಲಾವಣೆ ಪ್ರಕ್ರಿಯೆ ಪ್ರಾರಂಭವಾಗುವ ಮುನ್ನವೇ ಅವರು ಸ್ಥಾನ ತೊರೆದಿದ್ದಾರೆ.
ಚುನಾವಣಾ ಸೋಲಿನ ನಂತರ ಇಶಿಬಾ ಅವರ ಹುದ್ದೆ ಅಲುಗಾಡತೊಡಗಿತ್ತು. ದೇಶದಲ್ಲಿ ಹೆಚ್ಚಿದ ಜೀವನ ವೆಚ್ಚ ಜನರಲ್ಲಿ ಅಸಮಾಧಾನ ಉಂಟುಮಾಡಿತ್ತು. ಇದರಿಂದ ಆಡಳಿತ ಮೈತ್ರಿ ಪಕ್ಷವು ಸಂಸತ್ತಿನ ಎರಡೂ ಸದನಗಳಲ್ಲಿ ಬಹುಮತ ಕಳೆದುಕೊಂಡಿತು.
ಇಶಿಬಾ ದೇಶದಲ್ಲಿ ಹಣದುಬ್ಬರ ಇಳಿಸಲು ಹಾಗೂ ಪಕ್ಷದೊಳಗೆ ಸುಧಾರಣೆ ತರಲು ಪ್ರಯತ್ನಿಸಿದ್ದರು. ಆದರೆ ಪಕ್ಷದ ಬಲಪಂಥೀಯ ನಾಯಕರು ಅವರ ಮೇಲೆ ಒತ್ತಡ ಹಾಕಿದ್ದರು. ಇದಲ್ಲದೆ ಎಲ್‌ಡಿಪಿ ಪಕ್ಷವು ನಿಧಿ ಹಗರಣಗಳಲ್ಲೂ ಸಿಲುಕಿಕೊಂಡಿತ್ತು.
ಅಮೆರಿಕ ಜೊತೆಗಿನ ಸುಂಕ ಒಪ್ಪಂದವು ತನ್ನ ರಾಜೀನಾಮೆಗೆ ಕಾರಣಗಳಲ್ಲಿ ಒಂದಾಗಿದೆ ಎಂದು ಇಶಿಬಾ ತಿಳಿಸಿದ್ದಾರೆ.
ಇಶಿಬಾ ನಂತರ ಪ್ರಧಾನಿ ಹುದ್ದೆಗೆ ಯಾರು ಎಂಬ ಕುತೂಹಲ ಹೆಚ್ಚಾಗಿದೆ.
- ಸನೇ ತಕೈಚಿ: ಹಣಕಾಸು ತಜ್ಞ, ಕಳೆದ ಬಾರಿ ಇಶಿಬಾ ವಿರುದ್ಧ ಸ್ಪರ್ಧಿಸಿ ಅಲ್ಪ ಅಂತರದಿಂದ ಸೋತವರು.
- ಶಿಂಜಿರೊ ಕೊಯಿಜುಮಿ: ಕೃಷಿ ಸಚಿವರು ಹಾಗೂ ಮಾಜಿ ಪ್ರಧಾನಿ ಜುನಿಚಿರೊ ಕೊಯಿಜುಮಿ ಅವರ ಪುತ್ರ.
ಉತ್ತರಾಧಿಕಾರಿ ಆಯ್ಕೆಯಾಗುವವರೆಗೆ ಇಶಿಬಾ ಪ್ರಧಾನಿಯಾಗಿ ಮುಂದುವರಿಯುತ್ತಾರೆ.