ಇತ್ತೀಚೆಗಷ್ಟೇ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು (Test series) 2-1 ಅಂತರದಿಂದ ಗೆದ್ದುಕೊಂಡಿದ್ದ ಪಾಕಿಸ್ತಾನ ಕ್ರಿಕೆಟ್ ತಂಡ (Pakistan cricket team) ಇದೀಗ ಕೆಲವೇ ದಿನಗಳಲ್ಲಿ ಆಸ್ಟ್ರೇಲಿಯಾ ಪ್ರವಾಸವನ್ನು ಕೈಗೊಳ್ಳಲಿದೆ.
ಈ ಪ್ರವಾಸಕ್ಕಾಗಿ ಈಗಾಗಲೇ ತಂಡವನ್ನು ಸಹ ಪ್ರಕಟಿಸಲಾಗಿದೆ. ಆದರೆ ಈ ನಡುವೆ ಪಾಕ್ ಮಂಡಳಿ ಮತ್ತೊಂದು ವಿವಾದಾತ್ಮಕ ನಿರ್ಧಾರವನ್ನು ತೆಗೆದುಕೊಂಡಿದ್ದು, ತಂಡದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಗ್ಯಾರಿ ಕರ್ಸ್ಟನ್ ಅವರನ್ನು ತಮ್ಮ ಹುದ್ದೆಯಿಂದ ತೆಗೆದುಹಾಕಿದೆ.
ಇದೀಗ ಅವರ ಜಾಗಕ್ಕೆ ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಜೇಸನ್ ಗಿಲ್ಲೆಸ್ಪಿ (Jason Gillespie) ಅವರನ್ನು ಪಾಕಿಸ್ತಾನದ ಏಕದಿನ ಹಾಗೂ ಟಿ20 ತಂಡಕ್ಕೆ ನೂತನ ಮುಖ್ಯ ಕೋಚ್ ಆಗಿ ನೇಮಿಸಿದೆ.
ಗ್ಯಾರಿ ಕರ್ಸ್ಟನ್ (Gary Kirsten) ರಾಜೀನಾಮೆ ನೀಡಿದ ಕೆಲವೇ ಕ್ಷಣಗಳಲ್ಲಿ ಅದನ್ನು ಅಂಗೀಕರ ಮಾಡಿದ ಪಾಕ್ ಮಂಡಳಿ, ಆ ಕ್ಷಣವೇ ತಂಡಕ್ಕೆ ನೂತನ ಮುಖ್ಯ ಕೋಚ್ ಆಗಿ ಗಿಲ್ಲೆಸ್ಪಿ (Jason Gillespie) ಅವರನ್ನು ನೇಮಿಸಿದೆ.
ಪಾಕ್ ಮಂಡಳಿಯ ಈ ಹಠಾತ್ ನಿರ್ಧಾರದಿಂದ ಸಾಕಷ್ಟು ಪ್ರಶ್ನೆಗಳು ಹುಟ್ಟಿಕೊಂಡಿದ್ದು, ಮಂಡಳಿಯೇ ಗ್ಯಾರಿ ಅವರಿಂದ ಒತ್ತಾಯ ಪೂರ್ವಕವಾಗಿ ರಾಜೀನಾಮೆ ಪಡೆದಿದೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡುತ್ತಿವೆ.
ಇನ್ನು ಮುಖ್ಯ ಕೋಚ್ ಆಯ್ಕೆತ ಕುರಿತು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಹಿತಿ ನೀಡಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ, ‘ಮುಂದಿನ ತಿಂಗಳು ನಡೆಯಲಿರುವ ಸೀಮಿತ ಓವರ್‌ಗಳ ಆಸ್ಟ್ರೇಲಿಯಾ ಪ್ರವಾಸದಲ್ಲಿ ಜೇಸನ್ ಗಿಲ್ಲೆಸ್ಪಿ ಪಾಕಿಸ್ತಾನ ಪುರುಷರ ಕ್ರಿಕೆಟ್ ತಂಡದ ಕೋಚ್ ಆಗಿರುತ್ತಾರೆ.
ಈ ಹಿಂದೆ ಕೋಚ್ ಆಗಿದ್ದ ಗ್ಯಾರಿ ಕರ್ಸ್ಟನ್ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದು ಅದನ್ನು ಅಂಗೀಕರಿಸಲಾಗಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ತಿಳಿಸಿದೆ.
ಪಾಕಿಸ್ತಾನದ ಮಾಧ್ಯಮ ವರದಿಗಳ ಪ್ರಕಾರ, ಗ್ಯಾರಿ ಕರ್ಸ್ಟನ್ ಕೋಚ್ ಹುದ್ದೆಯನ್ನು ತೊರೆಯಲು ಬಯಸಿರಲಿಲ್ಲ. ಅವರು ಜಿಂಬಾಬ್ವೆ ಮತ್ತು ಆಸ್ಟ್ರೇಲಿಯ ವಿರುದ್ಧದ ಸರಣಿಗಾಗಿ ಸಂಪೂರ್ಣ ಯೋಜನೆಗಳನ್ನು ಮಾಡಿದ್ದರು.
ಆದರೆ PCB ಇದ್ದಕ್ಕಿದ್ದಂತೆ ನಿರ್ಧಾರ ತೆಗೆದುಕೊಂಡು ಅವರಿಂದ ರಾಜೀನಾಮೆ ಪಡೆದುಕೊಂಡಿದೆ ಎಂದು ವರದಿಯಾಗಿದೆ.
PCBಯ ಈ ನಿರ್ಧಾರದಿಂದ ಜೇಸನ್ ಗಿಲ್ಲೆಸ್ಪಿ ಕೂಡ ನಿರಾಶೆಗೊಂಡಿದ್ದು, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಪತ್ರಿಕಾಗೋಷ್ಠಿಯಲ್ಲಿ ಅವರು ಯಾವುದೇ ಆಟಗಾರನನ್ನು ಆಯ್ಕೆ ಮಾಡುವ ಹಕ್ಕು ನನಗಿಲ್ಲ, ಹೀಗಾಗಿ ಆಟಗಾರರ ಆಯ್ಕೆ ವಿಚಾರದಲ್ಲಿ ಏನನ್ನೂ ಹೇಳಲಾರೆ ಎಂದು ಹೇಳಿದ್ದರು.