Ranchi (Jharkhand): ಜಾರ್ಖಂಡ್ (Jharkhand) ಪೊಲೀಸರು ಒಟ್ಟು ₹8.45 ಕೋಟಿ ಬಹುಮಾನ ಘೋಷಿಸಿರುವ 55 ಮಾವೋವಾದಿಗಳ ಪತ್ತೆಗೆ ಶೋಧ ಕಾರ್ಯವನ್ನು ತೀವ್ರಗೊಳಿಸಿದ್ದಾರೆ. ಈ ಪಟ್ಟಿಯಲ್ಲಿ ಸಿಪಿಐ (ಮಾವೋವಾದಿ) ಕಮಾಂಡರ್‌ರೊಂದಿಗೆ ಹಲವಾರು ಪ್ರಮುಖ ನಕ್ಸಲರು ಇದ್ದಾರೆ.
ಪತ್ರಿಕೆಗೆ ನೀಡಿದ ಮಾಹಿತಿಯಲ್ಲಿ ಪೊಲೀಸರು, ಕಳೆದ ಆರು ತಿಂಗಳಿಂದ ನಕ್ಸಲ್ ಶೋಧ ಕಾರ್ಯಾಚರಣೆ ಜೋರಾಗಿದ್ದು, ಇದುವರೆಗೆ 10 ಮಂದಿ ನಕ್ಸಲರು ಶರಣಾಗಿರುವುದು, 17 ಮಂದಿ ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ.
ಕಾರ್ಯಾಚರಣೆಯ ಸಮಯದಲ್ಲಿ ಭದ್ರತಾ ಪಡೆಗಳು ಲೂಟಿ ಮಾಡಲಾದ 31 ಸಹಿತ 113 ಶಸ್ತ್ರಾಸ್ತ್ರಗಳು, 8,591 ಮದ್ದು ಗುಂಡುಗಳು, 177 ಕೆ.ಜಿ ಸ್ಪೋಟಕ ವಸ್ತುಗಳು ಮತ್ತು 179 ಐಇಡಿ ಬಾಂಬ್ ಗಳನ್ನು ವಶಪಡಿಸಿವೆ. ಜೊತೆಗೆ ಜಾರ್ಖಂಡ್-ಒಡಿಶಾ ಸಂಯುಕ್ತ ಕಾರ್ಯಾಚರಣೆಯಲ್ಲಿ 3,811 ಕೆ.ಜಿ ಜಿಲೆಟಿನ್ ಸಹ ವಶಕ್ಕೆ ಬಂದಿದೆ.
2025ರ ಜನವರಿಯಿಂದ ಜೂನ್ ವರೆಗೆ ಒಟ್ಟು 197 ನಕ್ಸಲರನ್ನು ಬಂಧಿಸಲಾಗಿದೆ. ಇದರಲ್ಲಿ ಪ್ರಾದೇಶಿಕ ಸಮಿತಿ ಸದಸ್ಯರು, ವಲಯ ಕಮಾಂಡರ್‌ಗಳು ಸೇರಿದ್ದಾರೆ.
ತಲಾ ₹1 ಕೋಟಿ ಬಹುಮಾನ ಹೊಂದಿರುವ ಮಿಸಿರ್ ಬೆಸ್ರಾ, ಆಸಿಮ್ ಮಂಡಲ್, ಅನಲ್ ಡಾ ಮತ್ತು ಅನೂಜ್ ಸೇರಿ ಪ್ರಮುಖ ಮಾವೋ ಕಮಾಂಡರ್‌ಗಳು ಈ ಶೋಧದ ಗುರಿಯಾಗಿದ್ದಾರೆ.
ಕೇಂದ್ರ ಸರ್ಕಾರ ನಕ್ಸಲ್ ಮುಕ್ತ ಭಾರತಕ್ಕಾಗಿ ಬದ್ಧವಾಗಿದೆ. ಶರಣಾಗತಿಗೆ ಪ್ರೋತ್ಸಾಹದ ಜೊತೆಗೆ, ನಿರಂತರ ಕಾರ್ಯಾಚರಣೆಗಳು ನಡೀತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.